` ತಾಯಿಗೆ ತಕ್ಕ ಮಗ ನೋಡಲು 10 ಕಾರಣಗಳು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
10 reasons to watch thayige thakka maga
Thayige Thakka Maga

ತಾಯಿಗೆ ತಕ್ಕ ಮಗ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಶಶಾಂಕ್ ನಿರ್ದೇಶನದ ಅಜಯ್ ರಾವ್-ಸುಮಲತಾ-ಅಶಿಕಾ ರಂಗನಾಥ್ ಅಭಿನಯದ ಸಿನಿಮಾ ತೆರೆಯ ಮೇಲೆ ಬರಲು ಸಿದ್ಧವಾಗಿದೆ. ಈ ಸಿನಿಮಾ ನೋಡೋಕೆ ಕೆಲವು ವಿಶೇಷ ಕಾರಣಗಳೂ ಇವೆ.

1. ತಾಯಿಗೆ ತಕ್ಕ ಮಗ, ಅಣ್ಣಾವ್ರ ಸೂಪರ್ ಹಿಟ್ ಸಿನಿಮಾದ ಟೈಟಲ್. ಅಣ್ಣಾವ್ರ ಸಿನಿಮಾ ಟೈಟಲ್ ಎತ್ತಿಕೊಂಡ ತಕ್ಷಣ ನಿರ್ದೇಶಕನ ಮೇಲೊಂದು ತಂತಾನೇ ಒಂದು ಜವಾಬ್ದಾರಿ ಹೆಗಲೇರುತ್ತೆ. ಅದಕ್ಕೆ ಚ್ಯುತಿ ಬಾರದಂತೆ ಚಿತ್ರ ನಿರ್ದೇಶಿಸಿದ್ದಾರೆ ಶಶಾಂಕ್.

2. ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ನಟಿಸಿರುವುದು ಸುಮಲತಾ ಅಂಬರೀಷ್. ಇದುವರೆಗೆ ಇಂತಹದ್ದೊಂದು ರೋಲ್ ಮಾಡಿಲ್ಲ. ರೆಬಲ್‍ಸ್ಟಾರ್ ಅಮ್ಮನಾಗಿ, ಕ್ರಾಂತಿಕಾರಿ ಲಾಯರ್ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ ಸುಮಲತಾ.

3. ಅಜಯ್ ರಾವ್ ಅಭಿನಯದ 25ನೇ ಸಿನಿಮಾ ಇದು ಎನ್ನುವುದು ಒಂದು ವಿಶೇಷ. ಆದರೆ, ಸಿನಿಮಾ ಶುರುವಾಗಿ ಕೆಲವು ದಿನಗಳಾಗುವವರೆಗೆ ಇದು ತಮ್ಮ 25ನೇ ಸಿನಿಮಾ ಎನ್ನುವುದು ಅವರಿಗೇ ಗೊತ್ತಿರಲಿಲ್ಲ.

4. ನಿರ್ದೇಶಕ ಶಶಾಂಕ್ ಬ್ಯಾನರ್‍ನ ಮೊದಲ ಸಿನಿಮಾ. ಸಿಕ್ಸರ್, ಮೊಗ್ಗಿನ ಮನಸ್ಸು, ಕೃಷ್ಣಲೀಲಾ, ಕೃಷ್ಣನ್ ಲವ್ ಸ್ಟೋರಿ, ಬಚ್ಚನ್, ಮುಂಗಾರು ಮಳೆ2.. ಹೀಗೆ ಹಿಟ್ ಚಿತ್ರಗಳನ್ನೇ ಹೆಚ್ಚು ನೀಡಿರುವ ಶಶಾಂಕ್ ಈ ಚಿತ್ರದ ನಿರ್ಮಾಪಕರೂ ಹೌದು.

5. ಅಶಿಕಾ ರಂಗನಾಥ್, ಈ ಚಿತ್ರದಲ್ಲಿ ಗ್ಲಾಮರಸ್ಸಾಗಿ ಕಾಣಿಸಿಕೊಂಡಿದ್ದಾರೆ. ಚುಟು ಚುಟು ಹಾಡಿನಲ್ಲಿ ಮೈಚಳಿ ಬಿಡಿಸಿದ್ದ ಅಶಿಕಾ, ಈ ಚಿತ್ರದಲ್ಲಿ ಮೈ ಬಿಸಿ ಏರಿಸುವಂತೆ ಕಾಣಿಸಿಕೊಂಡಿದ್ದಾರೆ.

6. ಚಿತ್ರದಲ್ಲಿ ನಲ್‍ಪಾಡ್ ಗ್ಯಾಂಗ್‍ನ ಪ್ರಸ್ತಾಪವೂ ಇದೆ ಎನ್ನಲಾಗಿದ್ದು, ವಿವಾದಕ್ಕೂ ಕಾರಣವಾಗಿತ್ತು. ಚಿತ್ರದಲ್ಲಿ ಆ ಘಟನೆಯ ನೆರಳು ಇದೆ ಎನ್ನುವ ಸುಳಿವಂತೂ ಕಾಣುತ್ತಿದೆ.

7. ಅಜಯ್ ರಾವ್‍ಗೆ ಮೊದಲ ಸಿನಿಮಾದ ಅಮ್ಮ ಸುಮಲತಾ ಅಂಬರೀಷ್, 25ನೇ ಸಿನಿಮಾದಲ್ಲೂ ಅಮ್ಮನಾಗಿರುವುದು ವಿಶೇಷ. 

8. ಅಜಯ್ ರಾವ್‍ಗೆ ಆ್ಯಕ್ಷನ್ ಹೀರೋ ಆಗಬೇಕು ಎನ್ನುವ ಕನಸಿತ್ತು. ಮಾರ್ಷಲ್ ಆಟ್ರ್ಸ್ ಕೂಡಾ ಕಲಿತಿದ್ದ ಅಜಯ್ ರಾವ್‍ಗೆ ಎಕ್ಸ್‍ಕ್ಯೂಸ್ ಮಿ ಚಿತ್ರದ ಸಾಫ್ಟ್ ಹುಡುಗನ ಪಾತ್ರ ಇಮೇಜ್ ಬದಲಿಸಿತ್ತು. ಅವರ ಕನಸು 25ನೇ ಸಿನಿಮಾದಲ್ಲಿ ಈಡೇರಿದೆ.

9. ಶಶಾಂಕ್ ಮತ್ತು ಅಜಯ್ ರಾವ್ ಅವರದ್ದು ಹ್ಯಾಟ್ರಿಕ್ ಕಾಂಬಿನೇಷನ್. ಈ ಹಿಂದೆ ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣಲೀಲಾ ಎರಡರಲ್ಲೂ ಗೆದ್ದಿರುವ ಜೋಡಿ, ಹ್ಯಾಟ್ರಿಕ್ ಜೋಡಿಯಾಗುವ ಕನಸಿನಲ್ಲಿದೆ.

10. ತಾಯಿಗೆ ತಕ್ಕ ಮಗಕ್ಕೆ ಸಂಗೀತ ನೀಡಿರುವುದು ಜುಡಾ ಸ್ಯಾಂಡಿ. ಚಿತ್ರದ ಎಲ್ಲ ಹಾಡುಗಳೂ ಹಿಟ್ ಆಗಿವೆ. ಚಂದನ್ ಶೆಟ್ಟಿ ಹಾಡಿರುವ ಟೈಟಲ್ ಟ್ರ್ಯಾಕ್ ಸೂಪರ್ ಹಿಟ್.