ಮೀಟೂ ವಿರೋಧಿಸಿ ಮಾತನಾಡುತ್ತಾ, ನಟಿ ಸಂಗೀತಾ ಭಟ್‍ರನ್ನು ಟೀಕಿಸಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಅವರ ಪತ್ನಿ ಆರತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೀಟೂ ಆರೋಪ ಮಾಡುವ ಮೂಲಕ, ಈ ನಟಿಯರು ತಾವು ಪತಿವ್ರತೆಯರು, ಸತಿ ಸಾವಿತ್ರಿಯರು ಎಂದು ತೋರಿಸಿಕೊಳ್ಳೋಕೆ ಹೊರಟಿದ್ದಾರೆ ಎಂದು ನಿರ್ದೇಶಕ ಗುರು ಟೀಕಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗುರು ಪ್ರಸಾದ್ ಪತ್ನಿ ಆರತಿ `ನಾನು ಗುರುಪ್ರಸಾದ್ ಪತ್ನಿ ಅಲ್ಲ. 3 ವರ್ಷಗಳ ಹಿಂದೆಯೇ ನಾವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಅರ್ಧ ರಾತ್ರಿಯಲ್ಲಿ ನನ್ನನ್ನು ನನ್ನ ಮಗನೊಂದಿಗೆ ಹೊರಹಾಕಿದ್ದ ಗುರುಪ್ರಸಾದ್‍ಗೆ, ಇನ್ನೊಬ್ಬರಿಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವ ನೈತಿಕತೆ ಇದೆಯೇ..'' ಎಂದು ಪ್ರಶ್ನಿಸಿದ್ದಾರೆ.
ಮೀಟೂ ಕುರಿತು ನನಗೆ ಹೆಚ್ಚು ಗೊತ್ತಿಲ್ಲ. ಆದರೆ, ಒಬ್ಬ ಮಹಿಳೆ ಬಹಿರಂಗವಾಗಿ ಹೊರಬಂದು ನನಗೆ ತೊಂದರೆಯಾಗಿದೆ ಎಂದು ಹೇಳಿಕೊಳ್ಳೋದು ಸುಲಭದ ಮಾತಲ್ಲ. ಬೇರೊಬ್ಬರ ಖಾಸಗಿ ಜೀವನದ ಬಗ್ಗೆ ಮಾತನಾಡುವವರು ಮೊದಲು ತಮ್ಮ ಖಾಸಗಿ ಜೀವನ ಹೇಗಿದೆ ಎಂದು ನೋಡಿಕೊಳ್ಳಲಿ ಎಂದಿದ್ದಾರೆ ಆರತಿ.