ಶೃತಿ ಹರಿಹರನ್ ಮೀಟೂ ಆರೋಪದ ನಂತರ, ಅರ್ಜುನ್ ಸರ್ಜಾ ಪರ ನಿಲ್ಲುವವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಅದರಲ್ಲೂ ಅರ್ಜುನ್ ಸರ್ಜಾ ಜೊತೆ ಹಲವು ಚಿತ್ರಗಳಲ್ಲಿ ನಟಿಸಿರುವ ಖುಷ್ಬೂ, ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತಿದ್ದಾರೆ.
`ನಾನು ಚಿತ್ರರಂಗಕ್ಕೆ ಬಂದಿದ್ದೇ ಅರ್ಜುನ್ ಸರ್ಜಾ ಚಿತ್ರದ ಮೂಲಕ. ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದೇನೆ. ಅವರು ಸಹನಟರಷ್ಟೇ ಅಲ್ಲ, ನನ್ನ ಅತ್ಯುತ್ತಮ ಗೆಳೆಯರೂ ಹೌದು. ಅವರು ನನಗೆ 34 ವರ್ಷಗಳಿಂದ ಗೊತ್ತು. ಅವರ ಮೇಲೆ ಆರೋಪ ಮಾಡಿದ್ದಾರೆ ಎಂದರೆ ನಂಬೋಕೂ ಆಗುತ್ತಿಲ್ಲ. ಎಷ್ಟೋ ಬಾರಿ ಅವರೇ ನನಗೆ ರಕ್ಷಿಸಿದ್ದಾರೆ. ಈ ಸಮಯದಲ್ಲಿ ಅರ್ಜುನ್ ಜೊತೆ ನಾನು ನಿಲ್ಲಲೇಬೇಕು. ಶೃತಿಗೆ ನಾನು ಹೇಳೋದಿಷ್ಟೆ, ನೀವು ಈ ಮೂಲಕ ಒಬ್ಬ ವ್ಯಕ್ತಿಯನ್ನು ದೂಷಿಸುತ್ತಿಲ್ಲ. ನಿಮ್ಮ ಈ ಆರೋಪದಿಂದ ಆತನ ಪತ್ನಿ, ತಾಯಿ, ಇಬ್ಬರು ಹೆಣ್ಣು ಮಕ್ಕಳು.. ಎಲ್ಲರೂ ನೋವಲ್ಲಿ ಮುಳುಗಿದ್ದಾರೆ. ಅರ್ಜುನ್ ಇಷ್ಟು ವರ್ಷ ಗಳಿಸಿದ್ದ ಹೆಸರು, ಸಾಧನೆ ಎಲ್ಲದಕ್ಕೂ ಮಸಿ ಬಳಿದಿದ್ದೀರಿ. ಒಬ್ಬ ಸ್ನೇಹಿತೆಯಾಗಿ ನಾನು ಅರ್ಜುನ್ ಪರ ನಿಲ್ಲುತ್ತೇನೆ'.
ಮೀಟೂ ಅಭಿಯಾನ ಶುರುವಾದಾಗ, ರವಿಚಂದ್ರನ್ ಬಗ್ಗೆ ಯಾರೋ ಒಬ್ಬರು ಕೆಟ್ಟದಾಗಿ ಕೇಳಿದ್ದಕ್ಕೆ ರವಿಚಂದ್ರನ್ ವ್ಯಕ್ತಿತ್ವವನ್ನೇ ಕಟ್ಟಿಕೊಟ್ಟಿದ್ದ ಖುಷ್ಬೂ, ಈ ಬಾರಿ ಅರ್ಜುನ್ ಸರ್ಜಾ ಬೆನ್ನಿಗೂ ನಿಂತಿದ್ದಾರೆ.