ಉದ್ಘರ್ಷ. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸಿನಿಮಾ ದಿನೇ ದಿನೇ ಕುತೂಹಲ ಹುಟ್ಟಿಸುತ್ತಲೇ ಇದೆ. ಬೆತ್ತಲೆ ಕಾಲು, ಕೈಗಳನ್ನಷ್ಟೇ ತೋರಿಸಿ ಥ್ರಿಲ್ ಹುಟ್ಟಿಸಿದ್ದ ದೇಸಾಯಿ, ಚಿತ್ರದ ಮೇಕಿಂಗ್ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಈ ಮೇಕಿಂಗ್ ನೋಡುವಾಗ ಅಚ್ಚರಿಯಾಗಿರೋದು ಕಬಾಲಿ ಹುಡುಗಿಗೆ ತೊಡಿಸಿರುವ ಗೋಣಿಚೀಲದ ಡ್ರೆಸ್ಸು.
ಕಬಾಲಿ ಹುಡುಗಿ ಅಂದ್ರೆ ಸಾಯಿ ಧನ್ಸಿಕಾ, ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆಕೆಗೆ ಒಂದು ದೃಶ್ಯದಲ್ಲಿ ದೇಸಾಯಿ ಹಾಕಿಸಿರುವುದು ಅಪ್ಪಟ ಗೋಣಿಚೀಲದ ಡ್ರೆಸ್ಸು. ಹೌದು, ಗೋಣಿಚೀಲವೇ. ಚೆಲುವೆಯನ್ನು ಗೋಣಿಚೀಲದ ಡ್ರೆಸ್ ಹಾಕಿಸಿ ಮನೆಯಿಂದ ತಪ್ಪಿಸಿಕೊಂಡು ಹೊರಗೆ ಹೋಗುವ ದೃಶ್ಯ ಚಿತ್ರೀಕರಿಸಿದ್ದಾರೆ ದೇಸಾಯಿ.
ಕಬಾಲಿ ಆದ ಮೇಲೆ ನಾನು ಕಂಡ ಸೂಕ್ಷ್ಮ ನಿರ್ದೇಶಕರಲ್ಲಿ ದೇಸಾಯಿ ಕೂಡಾ ಒಬ್ಬರು. ಅವರು ತಮಗೆ ಅನಿಸಿದಂತೆ ದೃಶ್ಯ ಬರುವವರೆಗೆ ಶೂಟ್ ಮಾಡ್ತಾನೇ ಇರ್ತಾರೆ. ಚಿತ್ರದಲ್ಲಿ ನಾನು ಮೈ ಕೈಯ್ಯೆಲ್ಲ ಗಾಯ ಮಾಡಿಕೊಂಡು ಫೈಟ್ ಮಾಡಿದ್ದೇನೆ. ನಟಿಸಿದ್ದೇನೆ ಎನ್ನುತ್ತಾರೆ ಧನ್ಸಿಕಾ. ಚಿತ್ರದಲ್ಲಿ ಧನ್ಸಿಕಾ ರಶ್ಮಿ ಅನ್ನೋ ಬೋಲ್ಡ್ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ.