ದಿ ಟೆರರಿಸ್ಟ್. ರಾಗಿಣಿ ದ್ವಿವೇದಿ ನಾಯಕಿಯಾಗಿರುವ ಸಿನಿಮಾ, ಭಯೋತ್ಪಾದನೆಯ ಕಥೆ ಹೊಂದಿದೆ. ರಾಗಿಣಿ, ಈ ಚಿತ್ರದಲ್ಲಿ ರೇಷ್ಮಾ ಅನ್ನೋ ಮುಸ್ಲಿಂ ಯುವತಿಯ ಪಾತ್ರ ಮಾಡುತ್ತಿದ್ದಾರೆ. ಜೊತೆಗೆ ಸಿನಿಮಾದಲ್ಲಿರೋದು 2008ರ ಬೆಂಗಳೂರು ಸರಣಿ ಸ್ಫೋಟದ ಹಿನ್ನೆಲೆಯ ಕಥೆ. ಆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಉಗ್ರರು ಮುಸ್ಲಿಮರು. ಹಾಗಾದರೆ ಇದು ಮುಸ್ಲಿಮರನ್ನೇ ಟಾರ್ಗೆಟ್ ಮಾಡಿರುವ ಚಿತ್ರವಾ..? ಅಥವಾ ಮುಸ್ಲಿಮರು ಎಂದು ಹಣೆಪಟ್ಟಿ ಹೊತ್ತವರನ್ನು ಮುಕ್ತಿಗೊಳಿಸುವ ಚಿತ್ರವಾ..?
ಎರಡೂ ಅಲ್ಲ ಅಂತಾರೆ ನಿರ್ದೇಶಕ ಪಿ.ಸಿ.ಶೇಖರ್. ಟೆರರಿಸಂ ಅನ್ನೋದು ಜಗತ್ತಿನ ಸಮಸ್ಯೆ. ಹೆಚ್ಚಾಗಿ ಯಾವುದೇ ಸ್ಫೋಟ, ದಾಳಿ ನಡೆದರೆ.. ಅಲ್ಲಿ ಮುಸ್ಲಿಮರೇ ಹೆಚ್ಚಾಗಿ ಕಾಣಸಿಗ್ತಾರೆ. ಇದರಿಂದ ನಿಜಕ್ಕೂ ತೊಂದರೆ ಅನುಭವಿಸೋದು ಅಮಾಯಕ ಮುಸ್ಲಿಮರು. ನೂರರಲ್ಲಿ ಒಬ್ಬ ತಪ್ಪು ಮಾಡಿದರೂ ಇಡೀ ಸಮುದಾಯಕ್ಕೆ ಆ ಕಳಂಕ ಅಂಟಿಕೊಳ್ಳುತ್ತೆ. ಇದರ ನಡುವೆ ಸಂಬಂಧಗಳೇ ಮಾಯವಾಗಿ ಹೋಗುತ್ತವೆ. ಟೆರರಿಸ್ಟ್ ಸಿನಿಮಾದಲ್ಲಿರೋದು ಆ ಕಥೆ. ಎರಡು ದೇಶಗಳಿಗಿಂತ ಮನೆಯಲ್ಲಿ ಸಂಬಂಧ ಕಟ್ಟುವುದು ಎಷ್ಟು ಮುಖ್ಯ ಎಂದು ಕಥೆ ಹೇಳುತ್ತೇನೆ ಎನ್ನುತ್ತಾರೆ ಪಿ.ಸಿ.ಶೇಖರ್. ದಿ ಟೆರರಿಸ್ಟ್ ಸಿನಿಮಾ ನಾಳೆಯೇ ತೆರೆ ಕಾಣುತ್ತಿದೆ.