ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ನಿರ್ದೇಶಕ ಯಾರು..? ಅರೇ.. ಇದೇನಿದು.. ಪಿ.ಕುಮಾರ್ ಅಲ್ವಾ.. ಅಂತೀರೇನೋ.. ಹೌದು. ಪಿ.ಕುಮಾರ್ ನಿರ್ದೇಶನದ ಚಿತ್ರಕ್ಕೆ ಈಗ ಇನ್ನೊಬ್ಬರು ಸೇರಿಕೊಂಡಿದ್ದಾರೆ. ಅದು ವಿ.ಹರಿಕೃಷ್ಣ. ಚಿತ್ರದ ಟೈಟಲ್ ಕಾರ್ಡ್‍ನಲ್ಲಿ ವಿ.ಹರಿಕೃಷ್ಣ ಹಾಗೂ ಪೊನ್ನು ಕುಮಾರ್ ಇಬ್ಬರ ಹೆಸರನ್ನೂ ನಿರ್ದೇಶಕರೆಂದು ತೋರಿಸಲಾಗಿದೆಯಂತೆ.
ಯಜಮಾನ ಚಿತ್ರ ಶುರುವಾದಾಗಿನಿಂದ ಚಿತ್ರದ ಪ್ರತಿ ಹಂತದಲ್ಲೂ ವಿ.ಹರಿಕೃಷ್ಣ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರಂತೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ.. ಹೀಗೆ ಪ್ರತಿಯೊಂದರಲ್ಲೂ ತೊಡಗಿಸಿಕೊಂಡಿದ್ದ ಹರಿಕೃಷ್ಣ ಅವರಿಗೆ ನಿರ್ದೇಶಕನ ಕ್ರೆಡಿಟ್ ನೀಡಿದ್ದೇವೆ ಎಂದಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್.
ಅಂದಹಾಗೆ ಹರಿಕೃಷ್ಣ ಮತ್ತು ದರ್ಶನ್ ಕಾಂಬಿನೇಷನ್‍ನ 25ನೇ ಚಿತ್ರ ಯಜಮಾನ. ಸಂಗೀತ ನಿರ್ದೇಶನದ ಜೊತೆ ಜೊತೆಯಲ್ಲಿ ನಿರ್ದೇಶಕನ ಜವಾಬ್ದಾರಿಯನ್ನೂ ಹೊತ್ತಿರುವ ಹರಿಕೃಷ್ಣ, ನಿರ್ದೇಶಕರಾಗಬೇಕು ಎಂಬ ತಮ್ಮ ಕನಸನ್ನು ಯಜಮಾನ ಚಿತ್ರದ ಮೂಲಕ ನನಸು ಮಾಡಿಕೊಂಡಿದ್ದಾರೆ.