ಡಾ.ರಾಜ್ಕುಮಾರ್, ವರನಟನಷ್ಟೇ ಅಲ್ಲ, ಗಾನಕೋಗಿಲೆಯೂ ಹೌದು. ಡಾ.ರಾಜ್ರ ಕನ್ನಡ, ಕನ್ನಡದ ಉಚ್ಛಾರಣೆ, ಪದ ಪ್ರಯೋಗದಲ್ಲಿನ ಏರಿಳಿತ, ಹ್ರಸ್ವ, ದೀರ್ಘ, ಅನುಸ್ವಾರಗಳನ್ನು ಸಲೀಸಾಗಿ ಬಳಸುತ್ತಿದ್ದ ರೀತಿ.. ಪ್ರತಿಯೊಬ್ಬರಿಗೂ ಮಾದರಿ. ಅದ್ಭುತ ಗಾಯನಕ್ಕಾಗಿಯೇ ರಾಷ್ಟ್ರ ಪ್ರಶಸ್ತಿ ಪಡೆದಿರುವ ಡಾ.ರಾಜ್ಕುಮಾರ್ ಅವರ ಕಂಠಸಿರಿಯ ರಹಸ್ಯ ಏನು..? ಅದನ್ನು ಡಾ.ರಾಜ್ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್ಕುಮಾರ್ ಹೇಳಿಕೊಂಡಿದ್ದಾರೆ.
ರಾಜ್ ಅವರ ಕಂಠ ಶುದ್ಧಿ ಮಾಡಿದ್ದವರು ಅವರ ತಾತ. ರಾಜ್ ಮನೆಯವರು ರಂಗಭೂಮಿ ಹಿನ್ನೆಲೆಯವರು. ಹೀಗಾಗಿ ಚಿಕ್ಕ ವಯಸ್ಸಿನಿಂದಲೇ ಅಭ್ಯಾಸ ಮಾಡಿಸಿದ್ದರಂತೆ. ರಾತ್ರಿ ವೇಳೆ ದೊಡ್ಡದೊಂದು ಮಡಕೆಯಲ್ಲಿ ನೀರನ್ನು ತುಂಬಿಸಿಡುತ್ತಿದ್ದರಂತೆ ತಾತ. ಬೆಳಗ್ಗೆಯ ಹೊತ್ತಿಗೆ ಆ ನೀರು ಐಸ್ ವಾಟರ್ನಷ್ಟು ತಣ್ಣಗಿರುತ್ತಿತ್ತು. ಮಡಕೆಯೂ ಫ್ರಿಜ್ನಂತಾಗಿರುತ್ತಿತ್ತು. ಆಗ ಬಾಲಕ ರಾಜ್, ಆ ಮಡಿಕೆಯನ್ನು ಬೆಳಗ್ಗೆಯೇ ತಬ್ಬಿ ಹಿಡಿಯಬೇಕಿತ್ತು. ಸಹಜವಾಗಿಯೇ ಮೈ ನಡುಕ ಶುರುವಾಗುತ್ತಿತ್ತು. ಆ ಮೈ ನಡುಕ ನಿಂತ ಮೇಲೆ ಸತತ ಒಂದು ಗಂಟೆ ಅಭ್ಯಾಸ ಮಾಡಿಸುತ್ತಿದ್ದರಂತೆ ಅವರ ತಾತ.
ಗಾನ ಕಂಠೀರವ ಡಾ.ರಾಜ್ಕುಮಾರ್ ಅವರ ಸುಶ್ರಾವ್ಯ ಕಂಠದ ರಹಸ್ಯವನ್ನು ಸ್ವತಃ ರಾಘವೇಂದ್ರ ರಾಜ್ಕುಮಾರ್, ರಿಯಾಲಿಟಿ ಶೋದಲ್ಲಿ ಬಹಿರಂಗಪಡಿಸಿದ್ದಾರೆ.