ಪ್ರೀತಿಯನ್ನು ಹೇಳಿಕೊಳ್ಳೋಕೆ ಇದುವರೆಗೆ ಹೂವು, ಹಣ್ಣು, ಸೂರ್ಯ, ಚಂದ್ರ, ಚಾಕೊಲೇಟು, ಮಂಜು, ಮಳೆಯನ್ನಷ್ಟೇ ನೋಡಿದ್ದ ಪ್ರೇಕ್ಷಕರಿಗೆ ಇದು ಹೊಸ ಭಾಷೆಯ ಪ್ರೀತಿ. ಅಪ್ಪಟ ಲಾಯರ್ ಭಾಷೆಯ ಪ್ರೀತಿ. ಹೀಗೂ ಲವ್ ಸಾಂಗ್ ಬರೆಯಬಹುದಾ ಎಂದು ಅಚ್ಚರಿ ಹುಟ್ಟಿಸುವಂತೆ ಒಂದು ಹಾಡು ಕಟ್ಟಿಕೊಟ್ಟಿದೆ ಅನಂತು V/s ನುಸ್ರತ್ ಸಿನಿಮಾ ತಂಡ.
ಈಗ ತಾನೇ ಜಾರಿಯಾಗಿದೆ ಪ್ರೀತಿ ಎಂದು ಶುರುವಾಗುವ ಹಾಡಿನಲ್ಲಿ ಬಳಸಿರುವುದ ಅಪ್ಪಟ ಕೋರ್ಟ್ ಭಾಷೆ. ವಿಚಾರಣೆಯ ಹಂತ, ಪೂರ್ವಾಪರ, ಕಾನೂನು, ಆರೋಪಿ, ವಾದ ಮಂಡನೆ, ಮುಂದೂಡಿಕೆ, ಕರಾರು, ದಾಖಲಾತಿ, ಮೀಸಲಾತಿ, ಹಾಜರಾತಿ, ಪ್ರಕರಣ, ಜಾಮೀನು.. ಹೀಗೆ ಅಪ್ಪಟ ಕೋರ್ಟಿನಲ್ಲಿ ಬಳಸುವ ಪದಗಳನ್ನೇ ಇಟ್ಟುಕೊಂಡು ಚೆಂದದ ಹಾಡು ಕಟ್ಟಿಕೊಟ್ಟಿದ್ದಾರೆ ಗೀತ ಸಾಹಿತಿ ಸಿದ್ದು ಕೋಡಿಪುರ ಮತ್ತು ಸಂಗೀತ ನಿರ್ದೇಶಕ ಸುನಾದ್ ಗೌತಮ್.
ವಿನಯ್ ರಾಜ್‍ಕುಮಾರ್, ಲತಾ ಹೆಗ್ಡೆ ಪ್ರಧಾನ ಪಾತ್ರದಲ್ಲಿರುವ ಚಿತ್ರದಲ್ಲಿ ವಿನಯ್, ಲಾಯರ್ ಅನಂತ ಕೃಷ್ಣ ಪಾತ್ರದಲ್ಲಿ ಕಾಣಿಸಿಕೊಂಡರೆ, ಜಡ್ಜ್ ನುಸ್ರತ್ ಫಾತಿಮಾ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಲತಾ ಹೆಗ್ಡೆ. ಹಾಸ್ಯ ಮಿಶ್ರಿತ ನವಿರು ಪ್ರೇಮಕಥೆಗೆ ಸುಧೀರ್ ಶಾನ್‍ಬೋಗ್ ನಿರ್ದೇಶನವಿದೆ. ಮಾಣಿಕ್ಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ರೆಡಿಯಾಗುತ್ತಿದೆ.