ದಿ ವಿಲನ್ ಚಿತ್ರ, ಕನ್ನಡ ಚಿತ್ರರಂಗದ ಎಲ್ಲ ನಿರ್ಮಾಪಕರ ಪಾಲಿಗೆ ಹೀರೋ ಆಗುತ್ತಾ..? ಅಂಥದ್ದೊಂದು ಚರ್ಚೆಗೆ ನಾಂದಿ ಹಾಡಿದೆ ವಿಲನ್ ಸಿನಿಮಾ. ದಿ ವಿಲನ್ ಚಿತ್ರ ಅಕ್ಟೋಬರ್ 18ಕ್ಕೆ ಬಿಡುಗಡೆಯಾಗುತ್ತಿದ್ದು, ಮಲ್ಟಿಪ್ಲೆಕ್ಸ್ಗಳು ಸಿನಿಮಾ ಲಾಭಾಂಶದ ಷೇರ್ನ್ನು 50:50 ಅನುಪಾತಕ್ಕಿಂತ ಹೆಚ್ಚು ಕೊಡುವಂತೆ ಚಿತ್ರ ತಂಡ ಫಿಲಂ ಚೇಂಬರ್ಗೆ ಮನವಿ ಮಾಡಿದೆ.
ಈಗ ಇರುವ ನಿಯಮಗಳ ಪ್ರಕಾರ, ಮಲ್ಟಿಪ್ಲೆಕ್ಸ್ಗಳು ಸಿನಿಮಾ ಪ್ರದರ್ಶನದಿಂದ ಲಾಭದಲ್ಲಿ ನಿರ್ಮಾಪಕರಿಗೆ ಶೇ.50ರಷ್ಟು ಮೊತ್ತ ನೀಡಿ, ಉಳಿದ ಶೇ.50ರಷ್ಟನ್ನು ತಾವು ಪಡೆದುಕೊಳ್ಳುತ್ತಿವೆ. ಇರಿಂದ ದೊಡ್ಡ ದೊಡ್ಡ ಸಿನಿಮಾಗಳಿಗೆ ನಷ್ಟವೇ ಹೆಚ್ಚು ಅನ್ನುವುದು ದಿ ವಿಲನ್ ತಂಡದ ವಾದ. ಅಲ್ಲದೆ ಆಂಧ್ರಪ್ರದೇಶದಲ್ಲಿ ನಿರ್ಮಾಪಕರಿಗೆ ಶೇ.55 ಮತ್ತು ಮಲ್ಟಿಪ್ಲೆಕ್ಸ್ನವರಿಗೆ ಶೆ.45 ಲಾಭಾಂಶ ಹಂಚಿಕೆ ಸೂತ್ರವಿದೆ. ಕರ್ನಾಟಕದಲ್ಲಿ 60:40 ಹಂಚಿಕೆ ಸೂತ್ರ ಮಾಡುವಂತೆ ಚಿತ್ರತಂಡ ಮನವಿ ಮಾಡಿದೆ.
ಈ ಕುರಿತು ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ ಮಲ್ಟಿಪ್ಲೆಕ್ಸ್ ಮಾಲೀಕರೊಂದಿಗೆ ಸಭೆ ನಡೆಸಿದ್ದಾರೆ. ಮಲ್ಟಿಪ್ಲೆಕ್ಸ್ ಮಾಲೀಕರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಸಭೆಯಲ್ಲಿ ನಿರ್ದೇಶಕ ಪ್ರೇಮ್, ನಿರ್ಮಾಪಕರು ಮತ್ತು ವಿತರಕರೂ ಆಗಿರುವ ಜಾಕ್ ಮಂಜು, ಜಯಣ್ಣ, ಕೆ.ಮಂಜು, ರಮೇಶ್ ಯಾದವ್, ಎನ್.ಕುಮಾರ್ ಮೊದಲಾದವರು ಭಾಗವಹಿಸಿದ್ದರು.