ಡಾ.ರಾಜ್‍ಕುಮಾರ್ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್, ಬೇರೆ ಬೇರೆ ಮನೆಗಳಲ್ಲಿದ್ದಾರೆ. ಒಂದೇ ಮನೆಯಲ್ಲಿ ಇಲ್ಲ. ಹಾಗಂತ ನಮ್ಮ ನಡುವೆ ಏನೋ ಆಗಿಬಿಟ್ಟಿದೆ, ಬೇರೆ ಬೇರೆಯಾಗಿದ್ದೇವೆ ಎಂದುಕೊಳ್ಳಬೇಡಿ. ಬೇರೆ ಬೇರೆ ಇರುವುದು ಮನೆಗಳು ಮಾತ್ರ, ಮನಸ್ಸುಗಳಲ್ಲ ಎಂದು ಹೇಳಿದ್ದಾರೆ ಶಿವರಾಜ್‍ಕುಮಾರ್.
ಗ್ರಾಮಾಯಣ ಚಿತ್ರದ ಟೀಸರ್ ಬಿಡುಗಡೆ ವೇಳೆ ಶಿವಣ್ಣ ಈ ಮಾತು ಹೇಳಿದಾಗ, ರಾಘವೇಂದ್ರ ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಇಬ್ಬರೂ ವೇದಿಕೆಯಲ್ಲಿದ್ದರು. ಅಪ್ಪು ನನಗಿಂತ 13 ವರ್ಷ ಚಿಕ್ಕವನು. ಆತನ ಪ್ರತಿಯೊಂದು ಸಕ್ಸಸ್‍ನ್ನೂ ಸಂಭ್ರಮಿಸುವ ಮೊದಲ ವ್ಯಕ್ತಿ ನಾನೇ ಎಂದರು ಶಿವಣ್ಣ. ರಾಘು ಚಿಕ್ಕವನಾದರೂ, ನಾನೂ ಅವನೂ ಗೆಳೆಯರಂತೆಯೇ ಇದ್ದೇವೆ ಎಂದ ಶಿವಣ್ಣ, ಸಣ್ಣ ಪುಟ್ಟ ಮನಸ್ತಾಪಗಳು ಬರುವುದು ಸಹಜ. ಆದರೆ, ಅಂತಹ ಮನಸ್ತಾಪಗಳನ್ನು ನಮ್ಮನ್ನು ಇನ್ನಷ್ಟು ಹತ್ತಿರ ಸೇರಿಸಿವೆ ಎಂದರು. ಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮವಾದರೂ, ನಮ್ಮ ಮನೆಯವರೇ ಕನಿಷ್ಠ ನೂರು ಮಂದಿ ಇರುತ್ತೇವೆ ಎಂದು ಹೇಳಿಕೊಂಡರು.
ಗಾಜನೂರಿನ ಬಾಲ್ಯದ ದಿನಗಳನ್ನು ನೆನೆದ ಶಿವರಾಜ್‍ಕುಮಾರ್, ಅಲ್ಲಿ ಈಜಾಡಿದ್ದು, ಮರಕೋತಿ ಆಟವಾಡಿದ್ದು, ಊರಿನ ಮನೆಗಳಲ್ಲಿ ಊಟ ಮಾಡಿಕೊಂಡು ಬೆಳದ ದಿನಗಳನ್ನು ನೆನಪಿಸಿಕೊಂಡರು. ಇಂದಿನ ಈ ಎನರ್ಜಿಗೆ, ಅಂದಿನ ಬಾಲ್ಯದಲ್ಲಿ ಆಡಿದ ಆಟಗಳೇ ಕಾರಣ ಎಂದು ನೆನಪಿಗೆ ಜಾರಿದರು ಶಿವರಾಜ್‍ಕುಮಾರ್.