ದಿ ವಿಲನ್ ಚಿತ್ರದ ಹಾಡುಗಳು ರಿಲೀಸ್ ಆಗಿವೆ. ವಿಡಿಯೋ ಟ್ರ್ಯಾಕ್ ಬಿಡದೆ, ಕೇವಲ ಲಿರಿಕಲ್ ವಿಡಿಯೋ ಬಿಟ್ಟು ಮೋಡಿ ಸೃಷ್ಟಿಸಿದ್ದಾರೆ ಪ್ರೇಮ್. ದಿನೇ ದಿನೇ ಹಾಡುಗಳ ಹಿಟ್ಸ್ ಹೆಚ್ಚುತ್ತಲೇ ಇದೆ. ಚಿತ್ರದ ಹಾಡುಗಳ ಸ್ಪೆಷಾಲಿಟಿ ಏನ್ ಗೊತ್ತಾ..? ಚಿತ್ರದ ಎಲ್ಲ ಹಾಡುಗಳಲ್ಲೂ ಪ್ರೇಮ್ ಇದ್ದಾರೆ.
ಚಿತ್ರದ ಎಲ್ಲ ಹಾಡುಗಳನ್ನೂ ಬರೆದಿರುವುದು ಜೋಗಿ ಪ್ರೇಮ್. ದಲೇರ್ ಮೆಹಂದಿಯಂತಹವರಿಂದ ಹಾಡಿಸಿದರೂ ಅದು ಪ್ರೇಮ್‍ಗೆ ಇಷ್ಟವಾಗಲಿಲ್ಲ. ಆಡು ಭಾಷೆಯನ್ನು ಹೆಚ್ಚಾಗಿ ಬಳಸಿದ್ದ ಪ್ರೇಮ್‍ಗೆ, ಆ ಆಡುಭಾಷೆಯ ಉಚ್ಛಾರಣೆ ಹಿಂದಿ ಗಾಯಕರಿಂದ ಸರಿ ಕಾಣಲಿಲ್ಲ. ಹೀಗಾಗಿ ಹಾಡುಗಳಲ್ಲಿ ಪ್ರೇಮ್ ಅವರ ಧ್ವನಿ ಖಾಯಂ ಆಗಿದೆ ಎನ್ನುತ್ತಾರೆ ಅರ್ಜುನ್ ಜನ್ಯ.
ಅರ್ಜುನ್ ಜನ್ಯ ಅವರಿಗೆ ದಿನಗಟ್ಟಲೆ ಕಾಟ ಕೊಟ್ಟಿದ್ದೇನೆ. ಈಗ ಒಳ್ಳೆಯ ಹಾಡುಗಳು ಬಂದಿವೆ. ನನ್ನ ಚಿತ್ರದಲ್ಲಿ ಹಾಡುಗಳಿಗೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತೇನೆ. ಪ್ರತಿಯೊಂದು ಹಾಡು, ಚಿತ್ರದ ಕಥೆಗೆ ಪೂರಕವಾಗಿವೆ ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ಪ್ರೇಮ್.
ಶಿವರಾಜ್‍ಕುಮಾರ್, ಸುದೀಪ್, ಆ್ಯಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಅಭಿನಯದ ಸಿನಿಮಾ, ಅಕ್ಟೋಬರ್‍ನಲ್ಲಿ ತೆರೆಕಾಣುವ ಸಾಧ್ಯತೆ ಇದೆ.