ಚಾಲೆಂಜಿಂಗ್ ಸ್ಟಾರ್ ದರ್ಶನ್ ನನಗೆ ಹೊಡೆದರು ಅನ್ನೋದು ಸಹಕಲಾವಿದ ಶಿವಶಂಕರ್ ಎಂಬುವವರ ಆರೋಪ. ದರ್ಶನ್ ಹೊಡೆದಿಲ್ಲ ಅನ್ನೋದು ಚಿತ್ರದ ನಿರ್ಮಾಪಕಿಯೂ ಆಗಿರುವ ಶೈಲಜಾ ನಾಗ್ ನೀಡಿರುವ ಸ್ಪಷ್ಟ ಉತ್ತರ. ನಿರ್ಮಾಪಕರಿಗೆ ಲಾಸ್ ಆಗುವಂತೆ ವರ್ತಿಸಿದಾಗ ಪ್ರಶ್ನಿಸೋದು ನಮ್ಮ ಜವಾಬ್ದಾರಿ ಅನ್ನೋದು ದಾಸ ದರ್ಶನ್ ಕೊಟ್ಟಿರುವ ಉತ್ತರ.
ಯಜಮಾನ ಚಿತ್ರದ ಶೂಟಿಂಗ್ ವೇಳೆ, ಶಿವಶಂಕರ್ ಎಂಬುವವರ ಮೇಲೆ ದರ್ಶನ್ ಹಲ್ಲೆ ಮಾಡಿದರು ಅನ್ನೋದು ಮೊದಲ ಆರೋಪ. ಈ ಹಿನ್ನೆಲೆಯಲ್ಲಿ ಸಹ ಕಲಾವಿದರ ಸಂಘದ ಸದಸ್ಯರೂ ಪ್ರತಿಭಟನೆಗಿಳಿದರು. ಆದರೆ, ಪೊಲೀಸ್ ಠಾಣೆವರೆಗೂ ಬಂದ ಶಿವಶಂಕರ್, ನಂತರ ದೂರು ನೀಡಲಿಲ್ಲ. ನಾನು ಕೂಡಾ ದರ್ಶನ್ ಅಭಿಮಾನಿ ಎಂದು, ದೂರು ನೀಡುವುದರಿಂದ ಹಿಂದೆ ಸರಿದರು.
ಇಡೀ ಪ್ರಕರಣ ಕುರಿತು ನಿರ್ಮಾಪಕಿ ಶೈಲಜಾನಾಗ್ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಕೂಡಾ ಸ್ಥಳದಲ್ಲೇ ಇದ್ದೆ. ಸಹಕಲಾವಿದ ಶಿವಶಂಕರ್, ಮೊಬೈಲ್‍ನಲ್ಲಿ ಶೂಟ್ ಮಾಡ್ತಾ ಇದ್ರು. ಕೋಟಿ ಕೋಟಿ ಸುರಿದು ನಿರ್ಮಿಸುತ್ತಿರುವ ಸಿನಿಮಾ ಇದು. ಹೀಗೆ ಮೊಬೈಲ್‍ನಲ್ಲಿ ಶೂಟ್ ಮಾಡೋದು ಸರಿಯಲ್ಲ ಎಂದು ಎಚ್ಚರಿಕೆ ಕೊಟ್ಟೆವು. ಎರಡು ಬಾರಿ ಹೇಳಿದರೂ ಆತ ಅದನ್ನೇ ಮುಂದುವರಿಸಿದಾಗ ದರ್ಶನ್, ಬೈದು ಹೊರಗೆ ಕಳಿಸಿದರು. ಅಷ್ಟೆ. ಹಲ್ಲೆ ಮಾಡಿರುವ ಘಟನೆಯೇ ಸುಳ್ಳು ಎಂದಿದ್ದಾರೆ ಶೈಲಜಾ ನಾಗ್. ನಿರ್ಮಾಪಕ ಬಿ.ಸುರೇಶ್ ಕೂಡಾ ದರ್ಶನ್ ಮೇಲಿನ ಆರೋಪ ಸುಳ್ಳು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಮೊಬೈಲ್ ಇಳ್ಸು. ಈಗಾಗಲೇ ಎರಡು ಬಾರಿ ಹೇಳಿದ್ದೇವೆ ಎಂದರಂತೆ ದರ್ಶನ್. ನಮ್ಮನ್ನು ನಂಬಿ ನಿರ್ಮಾಪಕರು 30 ಕೋಟಿ ಸುರಿದಿರ್ತಾರೆ. ಕೇವಲ ಲೈಕು, ಕಾಮೆಂಟ್‍ಗೋಸ್ಕರ ಈ ರೀತಿ ಮೊಬೈಲ್‍ನಲ್ಲಿ ಶೂಟ್ ಮಾಡೋದು ತಪ್ಪಲ್ವಾ ಎಂದಿದ್ದಾರೆ ದರ್ಶನ್.