ಕಾಮಿಡಿ ಕಿಂಗ್ ಮತ್ತೊಮ್ಮೆ ಹೆಣ್ಣಾಗಿದ್ದಾರೆ. ಈ ಮೊದಲು ಜೈಲಲಿತಾ ಚಿತ್ರದಲ್ಲಿ ಹೆಣ್ಣಿನ ವೇಷ ತೊಟ್ಟಿದ್ದ ಶರಣ್, ಹಂಗಾಮಾ ಸೃಷ್ಟಿಸಿದ್ದರು. ಈ ಬಾರಿ ಅಧ್ಯಕ್ಷ-2 ಚಿತ್ರದಲ್ಲಿ ಐಯ್ಯಂಗಾರಿ ಮಹಿಳೆಯ ವೇಷ ತೊಟ್ಟಿದ್ದಾರೆ. ಇನ್ನೂ ಒಂದು ವಿಶೇಷ ಇದೆ. ಈ ಹೆಣ್ಣಿನ ವೇಷದಲ್ಲಿ ಈ ಬಾರಿ ಶರಣ್ ಒಬ್ಬರೇ ಅಲ್ಲ, ಅವರ ಜೊತೆ ಆರ್ಮುಗಂ ರವಿಶಂಕರ್ ಹಾಗೂ ಸಾಧುಕೋಕಿಲ ಕೂಡಾ ಇರ್ತಾರೆ. ಸಿನಿಮಾದಲ್ಲಿ ಸುಮಾರು 40 ನಿಮಿಷಗಳ ಕಾಲ ರವಿಶಂಕರ್ ಮತ್ತು ಶರಣ್ ಇಬ್ಬರೂ ಹೆಣ್ಣಿನ ವೇಷದಲ್ಲೇ ಇರ್ತಾರಂತೆ.
ಆ ಪಾತ್ರಗಳಿಗಾಗಿ ಮೇಕಪ್ ಮಾಡೋಕೇ 3 ಗಂಟೆ ಬೇಕಾಗುತ್ತಿತ್ತು. ಶರಣ್, ಸಾಧು ಮತ್ತು ರವಿಶಂಕರ್ ಡೆಡಿಕೇಷನ್‍ನ್ನು ಮೆಚ್ಚಲೇಬೇಕು. ಸ್ವಲ್ಪವೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲ, ಇಡೀ ದಿನ ಮೇಕಪ್ ಹಾಳಾಗದಂತೆ ನೋಡಿಕೊಳ್ಳುತ್ತಿದ್ದರು. ಮೇಕಪ್ ತೆಗೆಯೋಕೇ 1 ಗಂಟೆ ಬೇಕಾಗುತ್ತಿತ್ತು ಎಂದು ಶೂಟಿಂಗ್ ಕತೆ ಹೇಳಿದ್ದಾರೆ ನಿರ್ದೇಶಕ ಹರಿ ಸಂತೋಷ್. ವಿದೇಶದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಈಗ ಸ್ವದೇಶಿ ಶೂಟಿಂಗ್‍ನಲ್ಲಿ ಬ್ಯುಸಿಯಾಗಬೇಕಿದೆ.