ಒಂದಲ್ಲ.. ಎರಡಲ್ಲಾ.. ಇದು ಸತ್ಯಪ್ರಕಾಶ್ ನಿರ್ದೇಶನದ ಚಿತ್ರ. ಉಮಾಪತಿ ನಿರ್ಮಾಣ ಸಿನಿಮಾ. ವಿಶೇಷವೇನು ಗೊತ್ತಾ..? ಈ ಚಿತ್ರದಲ್ಲಿ ಸ್ಟಾರ್‍ಗಳೇ ಇಲ್ಲ. ಎಲ್ಲರೂ ಅನುಭವಿ ರಂಗಭೂಮಿ ಕಲಾವಿದರು.
ಕಳೆದು ಹೋದ ತನ್ನ ನೆಚ್ಚಿನ ಪ್ರಾಣಿಯನ್ನು ಹುಡುಕಿಕೊಂಡು ನಗರಕ್ಕೆ ಬರುವ ಬಾಲಕ. ಅಲ್ಲಿ ಅವನಿಗೆ ಸಿಗುವ ಜನಗಳು, ಅವರ ಸ್ವಾರ್ಥ.. ಇವೆಲ್ಲವೂ ಅವನ ಮುಗ್ಧತೆಯನ್ನು ಉಳಿಸುತ್ತೋ.. ಸಾಯಿಸುತ್ತೋ ಅನ್ನೋದೇ ಚಿತ್ರದ ಕಥೆ ಅಂತಾರೆ ಸತ್ಯಪ್ರಕಾಶ್.
ರಾಮಾ ರಾಮಾ ರೇ ಚಿತ್ರಕ್ಕಿಂತ ಇದು ವಿಭಿನ್ನ ಕಥೆ ಎಂಬ ಭರವಸೆ ಕೊಡುವ ಸತ್ಯಪ್ರಕಾಶ್, ಮನುಷ್ಯನಲ್ಲಿ ಮುಗ್ಧತೆ ಹಾಗೂ ಇತರರ ನೋವಿಗೆ ಸ್ಪಂದಿಸುವ ಗುಣ ಇರಲೇಬೇಕು ಅಂತಾರೆ.
ಚಿತ್ರದಲ್ಲಿ ಗೂಡ್ಸ್ ಆಟೋ ಡ್ರೈವರ್ ಸುರೇಶ್ ಆಗಿ ನಟಿಸಿರುವುದು ನಾಗಭೂಷಣ್. ಇವರು ರಂಗಭೂಮಿ ಕಲಾವಿದರು. ಕರ್ನಾಟಕ ಎಂಟರ್‍ಟೈನ್‍ಮೆಂಟ್ ಬೋರ್ಡ್(ಕೆಇಬಿ) ಅನ್ನೋ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಆ ದಿನದ ಬದುಕಿಗಷ್ಟೆ ಮಹತ್ವ ಕೊಡುವ, ತಾನು ಮಾತ್ರ ಚೆನ್ನಾಗಿ ಇರಬೇಕು ಎನ್ನುವ ಸ್ವಾರ್ಥಿಯಾಗಿ ನಾಗಭೂಷಣ್ ನಟಿಸಿದ್ದಾರೆ.
ಇನ್ನೊಬ್ಬ ರಂಗಭೂಮಿ ನಟ ಪ್ರಭುದೇವ ಹೊಸದುರ್ಗ, ಎಲ್ಲರ ಕಷ್ಟಗಳಿಗೂ ಸ್ಪಂದಿಸುವ ರಾಜಣ್ಣನಾಗಿ ನಟಿಸಿದ್ದಾರೆ.
ರಂಜಾನ್ ಸಾಬ್ ಉಳ್ಳಾಗಡ್ಡಿ, ಚಿತ್ರದ ಹೀರೋ ಪುಟ್ಟ ಬಾಲಕ ಸಮೀರನ ತಂದೆಯಾಗಿ ನಟಿಸಿದ್ದಾರೆ. ಹುಸೇನ್ ಅನ್ನೋದು ಅವರ ಪಾತ್ರದ ಹೆಸರು. ಈ ಎಲ್ಲ ಪಾತ್ರಗಳೂ ನೋಡನೋಡುತ್ತಲೇ ಕುತೂಹಲ ಹುಟ್ಟಿಸುತ್ತಾ, ಮನಸ್ಸಿನಾಳಕ್ಕೆ ಇಳಿಯುತ್ತವೆ ಅನ್ನೋದು ಚಿತ್ರತಂಡದ ಪ್ರತಿಯೊಬ್ಬರ ಮಾತು. ಭರವಸೆ.