ನೆನಪಿರಲಿ ಪ್ರೇಮ್ ಮತ್ತು ದಿನಕರ್ ತೂಗುದೀಪ್ ಮತ್ತೊಮ್ಮೆ ಒಂದಾಗಿದ್ದಾರೆ. ಬರೋಬ್ಬರಿ 14 ವರ್ಷಗಳ ನಂತರ. ದಿನಕರ್ ತೂಗುದೀಪ್ ನಿರ್ದೇಶನದ ಮೊದಲ ಸಿನಿಮಾ ಜೊತೆ ಜೊತೆಯಲಿ. ಪ್ರೇಮ್-ರಮ್ಯಾ ಕಾಂಬಿನೇಷನ್‍ನ ಆ ಸಿನಿಮಾ, ನೆನಪಿರಲಿ ಪ್ರೇಮ್‍ರನ್ನು ಲವ್ಲೀ ಸ್ಟಾರ್ ಮಾಡಿದ್ದ ಸಿನಿಮಾ. ಹರಿಕೃಷ್ಣ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದ ಸಿನಿಮಾ. 2006ರಲ್ಲಿ ಬಂದಿದ್ದ ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಈಗ ಅದೇ ಜೋಡಿ, 14 ವರ್ಷಗಳ ನಂತರ ಪ್ರೇಮ್ ಮತ್ತು ದಿನಕರ್ ಮತ್ತೆ ಒಂದಾಗಿದ್ದಾರೆ. ಲೈಫ್ ಜೊತೆ ಒಂದ್ ಸೆಲ್ಫಿ ಎನ್ನುತ್ತಿದ್ದಾರೆ. ಈ 12 ವರ್ಷಗಳಲ್ಲಿ ದಿನಕರ್ ನಿರ್ದೇಶಿಸಿರುವುದು ಕೇವಲ 4 ಸಿನಿಮಾ. ಜೊತೆ ಜೊತೆಯಲಿ, ನವಗ್ರಹ, ಸಾರಥಿ ಮತ್ತು ಈಗ ಲೈಫ್ ಜೊತೆ ಒಂದ್ ಸೆಲ್ಫಿ. ಈ ಹಿಂದಿನ ಮೂರೂ ಸಿನಿಮಾಗಳೂ ಸೂಪರ್ ಹಿಟ್. ಇನ್ನೊಂದು ವಿಶೇಷವೆಂದರೆ, ಮೂರು ಚಿತ್ರಗಳ ನಡುವೆ ಒಂದಕ್ಕೊಂದು ಹೋಲಿಕೆಯೇ ಇಲ್ಲ. ಅದು ದಿನಕರ್ ಸ್ಪೆಷಾಲಿಟಿ.
ಹೀಗಾಗಿ ಈ ಬಾರಿ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಕುರಿತೂ ಸಾವಿರಾರು ನಿರೀಕ್ಷೆಗಳಿವೆ. ಆ ನಿರೀಕ್ಷೆಗಳನ್ನು ದಿನಕರ್ ಸುಳ್ಳು ಮಾಡಲ್ಲ ಅನ್ನೋ ವಿಶ್ವಾಸ ಪ್ರೇಮ್, ಪ್ರಜ್ವಲ್, ಹರಿಪ್ರಿಯಾ ಮತ್ತು ಪ್ರೇಕ್ಷಕ ಪ್ರಭುಗಳದ್ದು.