ಕೊಡಗು.. ಕೊಚ್ಚಿ ಹೋಗುವಂತಾ ಪ್ರವಾಹ ಸೃಷ್ಟಿಯಾಗಿಬಿಟ್ಟಿದೆ. 40ಕ್ಕೂ ಹೆಚ್ಚು ಹಳ್ಳಿಗಳೇ ಪ್ರವಾಹದಲ್ಲಿ ನಾಪತ್ತೆಯಾಗಿ ಹೋಗಿವೆ. 10ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸಾಧ್ಯವಾಗದಂಥಾ ಪರಿಸ್ಥಿತಿ. ಇಡೀ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ಮಿಡಿಯುತ್ತಿದೆ. ಚಿತ್ರರಂಗವೂ ಇದಕ್ಕೆ ಹೊರತಲ್ಲ.
ಡಾ.ರಾಜ್‍ಕುಮಾರ್ ಅಕಾಡೆಮಿ, ಸಾರ್ವಜನಿಕರಿಂದ ಆಹಾರ, ಔಷಧ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿದ್ದು ಈಗಾಗಲೇ 2 ಲಾರಿಗಳಷ್ಟು ವಸ್ತುಗಳನ್ನು ಕೊಡಗಿಗೆ ಕಳುಹಿಸಿಕೊಟ್ಟಿದೆ. ರಾಜ್ ಅಕಾಡೆಮಿ, ಹಣಕಾಸಿನ ನೆರವು ಸ್ವೀಕರಿಸುತ್ತಿಲ್ಲ.
ಯಶ್ ಅವರ ಅಭಿಮಾನಿಗಳ ಯಶೋಮಾರ್ಗ ಸಂಘಟನೆ ಕೂಡಾ ಒಂದು ಲಾರಿಯಷ್ಟು ಸಾಮಗ್ರಿಗಳನ್ನು ಮಡಿಕೇರಿಗೆ ರವಾನಿಸಿದೆ. ದರ್ಶನ್ ಅಭಿಮಾನಿಗಳು 3 ಲಾರಿಗಳಷ್ಟು ಸರಕು ಸರಂಜಾಮು, ಆಹಾರಗಳನ್ನು ಕೊಡಗಿಗೆ ಕಳಿಸಿದ್ದಾರೆ. ಸುದೀಪ್ ಅಭಿಮಾನಿಗಳು, ವಿಶೇಷವಾಗಿ ರೆಡಿಮೇಡ್ ಚಪಾತಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ, ಸ್ವತಃ ನೆರವು ನೀಡುವ ಸಂಪರ್ಕ ಕೇಂದ್ರವೇ ಆಗಿ ಹೋಗಿದ್ದಾರೆ. ಕೊಡಗಿನವರೇ ಆಗಿರುವ ನಟಿ ಹರ್ಷಿಕಾ ಪೂಣಚ್ಚ, ತುರ್ತು ಅಗತ್ಯವಿರುವ ಪದಾರ್ಥಗಳೊಂದಿಗೆ ಕೊಡಗಿಗೆ ತೆರಳಿದ್ದಾರೆ.
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸದಸ್ಯರು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ, ಕೊಡಗಿಗೆ ಕಳುಹಿಸಿಕೊಟ್ಟಿದ್ದಾರೆ. ಕರ್ನಾಟಕ ಫಿಲಂ ಚೇಂಬರ್ ಕೂಡಾ ಕೊಡಗು ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದೆ. ವಿವಿದ ಕಲಾವಿದರ ಅಭಿಮಾನಿ ಸಂಘಗಳು, ಮಾಧ್ಯಮ ಸಂಸ್ಥೆಗಳು, ಸಮಸ್ತ ಕನ್ನಡಿಗರೂ ಕೊಡಗಿನ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.