ಕಥೆಯೊಂದು ಶುರುವಾಗಿದೆ.. ಸೆನ್ನಾ ಹೆಗ್ಡೆ ಎಂಬ ನವನಿರ್ದೇಶಕನ ಪ್ರಯತ್ನ, ಎಲ್ಲರಿಗೂ ಇಷ್ಟವಾಗಿಬಿಟ್ಟಿದೆ. ಚಿತ್ರರಂಗದ ಮಾಮೂಲಿ ಸಿದ್ಧಸೂತ್ರಗಳನ್ನೆಲ್ಲ ಕಟ್ಟಿಟ್ಟು ಮೂಟಿಕಟ್ಟಿ, ಹೊಸತನದಲ್ಲಿ ಹೇಳಿದ ಕಥೆ ಪ್ರೇಕ್ಷಕರಿಗೆ ಇಷ್ಟವಾಗುತ್ತಿರುವುದು ಹೌದು. ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ಚಿತ್ರಲೋಕ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲೂ ಉತ್ತಮ ವಿಮರ್ಶೆಗಳು ಬಂದಿರುವುದು ವಿಶೇಷ.
ಸುಮಾರು ಒಂದೂವರೆ ವರ್ಷದ ನಂತರ ದಿಗಂತ್ ನಾಯಕತ್ವದ ಸಿನಿಮಾವೊಂದು ತೆರೆಕಂಡಿದ್ದು ಇನ್ನೊಂದು ವಿಶೇಷ. ಜೀವನದಲ್ಲಿ ಕಷ್ಟ ಸುಖ ಹಂಚಿಕೊಳ್ಳೋಕೆ ಒಂದು ಪ್ರೀತಿಸುವ ಜೀವ ಇರಬೇಕು ಎನ್ನುವುದು ಚಿತ್ರದ ಥಿಯರಿ. ಅದನ್ನು ಪ್ರೀತಿಯಷ್ಟೇ ನಿಧಾನವಾಗಿ ಹೇಳಿ ಗೆದ್ದಿದ್ದಾರೆ ನಿರ್ದೇಶಕ ಸೆನ್ನಾ ಹೆಗ್ಡೆ. ರಕ್ಷಿತ್ ಶೆಟ್ಟಿ ಹೇಳಿದ್ದು ನಿಜ, ಕನ್ನಡಕ್ಕೊಬ್ಬ ಭರವಸೆಯ ನಿರ್ದೇಶಕ ಸಿಕ್ಕಿದ್ದಾನೆ.
ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರದ ನಿರ್ಮಾಪಕರೂ ಹೌದು. ಈ ಚಿತ್ರವನ್ನು ಥಿಯೇಟರ್‍ಗೆ ಹೋಗಿ, ನೋಡಿ, ಪ್ರೋತ್ಸಾಹಿಸಿ ಎಂದಿದ್ದರು ರಕ್ಷಿತ್ ಶೆಟ್ಟಿ. ನಾನು ಈ ಮಾತನ್ನು ನಿರ್ಮಾಪಕನಾಗಿ ಹೇಳುತ್ತಿಲ್ಲ. ಈ ಚಿತ್ರ ಗೆದ್ದರೆ, ಇಂತಹ ಹಲವು ವಿಭಿನ್ನ ಪ್ರಯೋಗಗಳು ಕನ್ನಡಕ್ಕೆ ದಕ್ಕಲಿವೆ ಎಂದಿದ್ದರು.
ಚಿತ್ರತಂಡದ ನಿರೀಕ್ಷೆಯನ್ನು ಕನ್ನಡದ ಪ್ರೇಕ್ಷಕ ಹುಸಿಗೊಳಿಸಲಿಲ್ಲ. ಚಿತ್ರವನ್ನು ಗೆಲ್ಲಿಸಿಬಿಟ್ಟಿದ್ದಾನೆ. ಕರ್ನಾಟಕ ಹಾಗೂ ವಿದೇಶಗಳಲ್ಲಿ ಚಿತ್ರದ ಬಗ್ಗೆ ಉತ್ತಮ ಫಲಿತಾಂಶ ಹೊಮ್ಮುತ್ತಿದೆ. ಬಾಕ್ಸಾಫೀಸ್‍ನಲ್ಲೂ ಹೊಸ ಕಥೆಯೊಂದು ಶುರುವಾಗಿದೆ.