ಅಭಿಮಾನಿಗಳನ್ನು ದೇವರೆಂದು ಕರೆದು ಹೃದಯದಲ್ಲಿಟ್ಟುಕೊಂಡವರು ಡಾ.ರಾಜ್ಕುಮಾರ್. ಆಗ ಈಗಿನಂತೆ ಸೋಷಿಯಲ್ ಮೀಡಿಯಾ ಇರಲಿಲ್ಲ. ಇಂಟರ್ನೆಟ್ ಕಲ್ಪನೆಗಷ್ಟೇ ಸೀಮಿತವಾಗಿದ್ದ ಜಮಾನ ಅದು. ಆ ಕಾಲದಲ್ಲಿ ಅಭಿಮಾನಿಗಳ ಜೊತೆ ಕಲಾವಿದರು ಬಾಂಧವ್ಯ ಇಟ್ಟುಕೊಳ್ಳುತ್ತಿದ್ದುದೇ ಪತ್ರದ ಮೂಲಕ. ಅಂತಾದ್ದೊಂದು ಪತ್ರ ಇದು. ಈ ಪತ್ರ ಬರೆದಿದ್ದವರು ಡಾ.ರಾಜ್ಕುಮಾರ್.
1981ನೇ ಇಸವಿಯಲ್ಲಿ ಡಾ.ರಾಜ್ಕುಮಾರ್ ಗಾಯತ್ರಿ ಎಂಬ ಅಭಿಮಾನಿಯೊಬ್ಬರಿಗೆ ಬರೆದಿದ್ದ ಪತ್ರ ಇದು. ಪತ್ರದ ಲೆಟರ್ಹೆಡ್ ನೋಡಿದರೆ, ಆಗಿನ್ನೂ ರಾಜ್ಕುಮಾರ್ ಮದ್ರಾಸ್ನಲ್ಲೇ ಇದ್ದರು ಎನ್ನುವುದು ಅರ್ಥವಾಗುತ್ತೆ. ಆ ಪತ್ರದಲ್ಲಿ ಅಣ್ಣಾವ್ರು ಗಾಯತ್ರಿ ಎಂಬ ತಮ್ಮ ಅಭಿಮಾನಿಗೆ ಬರೆದಿದ್ದ ಪತ್ರದಲ್ಲಿ ಬಳಸಿರುವ ಭಾಷೆ, ವಿನಯ, ವಿಧೇಯತೆ, ಸರಳತೆ.. ಎಲ್ಲವೂ ಇಷ್ಟವಾಗುತ್ತದೆ.
ಅಣ್ಣಾವ್ರು ಬರೆದಿರುವ ಪತ್ರ ನೋಡಿ ನವರಸನಾಯಕ ಜಗ್ಗೇಶ್, ಇಂತಹ ಮಾನಸಿಕ ಗುರು ಪಡೆದ ನಾವೇ ಧನ್ಯ ಎಂದಿದ್ದರೆ, ನಿರ್ದೇಶಕ ಯೋಗರಾಜ್ ಭಟ್, ಪತ್ರ ಬರೆಯೋದು ಹೇಗೆ ಅನ್ನೋದನ್ನು ರಾಜಣ್ಣ ಪತ್ರ ನೋಡಿ ಕಲಿಯಬೇಕು. ಅಡ್ಬಿದ್ದೆ ರಾಜಣ್ಣ ಎಂದಿದ್ದಾರೆ.