ಕಥೆಯೊಂದು ಶುರುವಾಗಿದೆ ಚಿತ್ರದ ನಾಯಕಿ ಪೂಜಾ ದೇವರಿಯಾ. ಓದಿದ್ದು ಬೆಳೆದಿದ್ದು ಮುಂಬೈನಲ್ಲಾದರೂ ತಾಯಿ ಕನ್ನಡದವರಂತೆ. ಹೀಗಾಗಿ ಮುಂಬೈನಲ್ಲಿದ್ದರೂ ಅಲ್ಪಸ್ವಲ್ಪ ಕನ್ನಡವೂ ಬರುತ್ತಿತ್ತು. ಆದರೆ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ತಮಿಳು ಚಿತ್ರದ ಮೂಲಕ. ತಮಿಳು ಚಿತ್ರದ ಪ್ರಮೋಷನ್‍ನಲ್ಲಿ ಭಾಗವಹಿಸಿದ್ದಾಗ ರಕ್ಷಿತ್ ಶೆಟ್ಟಿ ಭೇಟಿ ಮಾಡಿದ್ದರಂತೆ ಪೂಜಾ. ಕನ್ನಡದಲ್ಲಿ ಅವಕಾಶ ಸಿಕ್ಕರೆ ನಟಿಸುವ ಆಸೆಯನ್ನೂ ಹೇಳಿಕೊಂಡಿದ್ದರಂತೆ. ಲೂಸಿಯಾ, ಉಳಿದವರು ಕಂಡಂತೆ ಹಾಗೂ ಯು ಟರ್ನ್,ನಾನು ನೋಡಿ ಮೆಚ್ಚಿದ ಕನ್ನಡ ಚಿತ್ರಗಳು. ಇಂತಹ ಸಬ್ಜೆಕ್ಟ್ ಸಿಕ್ಕರೆ ಕನ್ನಡದಲ್ಲಿ ನಟಿಸಬೇಕು ಎಂದುಕೊಳ್ಳುತ್ತಿದ್ದಾಗಲೇ, ಕಥೆಯೊಂದು ಶುರುವಾಗಿದೆ ಚಿತ್ರದ ಆಫರ್ ಬಂತು ಎಂದು ಹೇಳಿಕೊಳ್ತಾರೆ ಪೂಜಾ.
ಇದು ಎಂಥಹವರೂ ನಾನು ಮಾಡಬೇಕು ಎಂದು ಇಷ್ಟಪಡುವ ಪಾತ್ರ. ಇನ್ನು ಚಿತ್ರದ ಶೂಟಿಂಗ್ ಅಂತೂ ಗೆಳೆಯರ ಜೊತೆ ಟ್ರಿಪ್ ಹೋದ ಹಾಗಿತ್ತು. ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುತ್ತಾ, ಎಂಜಾಯ್ ಮಾಡಿದೆವು. ಒಂದೇ ಮನೆಯವರು ಎಂಬ ಫೀಲ್ ಇತ್ತು ಎಂದು ಶೂಟಿಂಗ್ ಅನುಭವ ನೆನಪಿಸಿಕೊಳ್ತಾರೆ ಪೂಜೆ.
ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ತೊಡಗಿಸಿಕೊಂಡ ಮೇಲೆ, ಅಲ್ಪಸ್ವಲ್ಪವಷ್ಟೇ ಬರುತ್ತಿದ್ದ ಕನ್ನಡ ಈಗ ಶೇ.70ರಷ್ಟು ಸುಧಾರಿಸಿದೆಯಂತೆ. ಸೆನ್ನಾ ಹೆಗ್ಡೆ ನಿರ್ದೇಶನದ ಚಿತ್ರದಲ್ಲಿ ಪೂಜಾಗೆ ದಿಗಂತ್ ಹೀರೋ. ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ, ನಾಳೆ ತೆರೆ ಕಾಣುತ್ತಿದೆ.