ಸುಹಾಸಿನಿ ಮತ್ತು ವಿಷ್ಣುವರ್ಧನ್. ಕನ್ನಡದ ಅದ್ಭುತ, ಯಶಸ್ವೀ ಜೋಡಿಗಳಲ್ಲಿ ಒಂದು. ಸುಹಾಸಿನಿಗೆ ತುಂಬಾ ಇಷ್ಟವಾಗುತ್ತಿದ್ದ ನಟ ವಿಷ್ಣು. ಚಿತ್ರರಂಗದ ಹೊರಗೂ ವಿಷ್ಣುಗೆ ಒಳ್ಳೆಯ ಗೆಳತಿಯಾಗಿದ್ದ ಸುಹಾಸಿನಿ, ವಿಷ್ಣುವರ್ಧನ್ ಅವರನ್ನು ಮೊದಲು ನೋಡಿದ್ದೇ ನಾಗರಹಾವು ಚಿತ್ರದಲ್ಲಿ. ಅಂದಹಾಗೆ ನಾಗರಹಾವು ಸುಹಾಸಿನಿ ನೋಡಿದ ಮೊದಲ ಕನ್ನಡ ಸಿನಿಮಾ.
``ನಾಗರಹಾವು ಚಿತ್ರ ನೋಡಿದಾಗ ನನಗೆ 13 ವರ್ಷ. ಅಂತಾರಾಜ್ಯ ಅಥ್ಲೆಟಿಕ್ಸ್ ಟೂರ್ನಿಯಲ್ಲಿ ಭಾಗವಹಿಸಿದ್ದೆ. ಕರ್ನಾಟಕಕ್ಕೆ ಬಂದಿದ್ದೆ. ಕರ್ನಾಟಕದ ಎದುರು ಪಂದ್ಯ ಸೋತೆವು. ಅದೇ ದಿನ ಸಂಜೆ ಸಿನಿಮಾ ನೋಡೋಕೆ ಹೋದ್ವು. ಹಾಗೆ ನೋಡಿದ ಸಿನಿಮಾ ನಾಗರಹಾವು. ಅಲ್ಲಿಯವರೆಗೆ ನನಗೆ ಕಮಲ್‍ಹಾಸನ್ ಒಬ್ಬರೇ ಶ್ರೇಷ್ಟ ನಟ ಎಂಬ ಭಾವನೆಯಿತ್ತು. ಅವರು ನನ್ನ ಚಿಕ್ಕಪ್ಪ ಅಲ್ವಾ..? ಆದರೆ, ವಿಷ್ಣುವರ್ಧನ್ ಅವರನ್ನು ನೋಡಿದ ಮೇಲೆ ಅದು ಬದಲಾಯ್ತು.
ಆಗ ವಿಷ್ಣುವರ್ಧನ್ ಸೇರಿದಂತೆ ಚಿತ್ರದಲ್ಲಿದ್ದ ಎಲ್ಲರೂ ಹೊಸಬರು. ಪುಟ್ಟಣ್ಣ ಕಣಗಾಲ್ ಅವರಿಗೇನೋ ಆಗಲೇ ದೊಡ್ಡ ಮಟ್ಟದ ಹೆಸರಿತ್ತು. ನಾನು ನೋಡಿದ ಮೊದಲ ಆ್ಯಂಗ್ರಿ ಯಂಗ್‍ಮ್ಯಾನ್ ಅಮಿತಾಬ್ ಬಚ್ಚನ್ ಅಲ್ಲ, ವಿಷ್ಣುವರ್ಧನ್.''
ಇದು ಸುಹಾಸಿನಿ ಹೇಳಿಕೊಂಡಿರುವ ನಾಗರಹಾವು ಕಥೆ. ನಾಗರಹಾವು ಚಿತ್ರದ ಮೂಲಕವೇ ಬೆಳಕಿಗೆ ಬಂದ ಅಂಬರೀಷ್ ಅವರ ಜೊತೆಯಲ್ಲಿ ಸುಹಾಸಿನಿ ಈಗ ಅಂಬಿ ನಿಂಗೆ ವಯಸ್ಸಾಯ್ತೋ.. ಚಿತ್ರದಲ್ಲಿ ನಟಿಸಿದ್ದಾರೆ.