ಕಥೆಯೊಂದು ಶುರುವಾಗಿದೆ ಚಿತ್ರದ ಹಾಡುಗಳಲ್ಲಿ ಅಬ್ಬರವಿಲ್ಲ. ಆದರೆ, ಹೃದಯಕ್ಕೆ ಇಳಿಯುತ್ತಿವೆ. ಟಪ್ಪಾಂಗುಚ್ಚಿ ಇಲ್ಲ. ಎದೆಯೊಳಗಿನ ಲಬ್ ಡಬ್‍ಗೆ ಹತ್ತಿರವಾಗುತ್ತಿವೆ. ವಿಭಿನ್ನ ಎನ್ನಿಸುತ್ತಿರುವ ಈ ಹಾಡುಗಳ ಹಿಂದಿನ ಮೋಡಿಗಾರನ ಹೆಸರು ಸಚಿನ್ ವಾರಿಯರ್. ಮಲಯಾಳಂ ಚಿತ್ರರಂಗದ ಸಂಗೀತ ನಿರ್ದೇಶಕ.
ಮಲಯಾಳಂನಲ್ಲಿ ಆನಂದಂ ಚಿತ್ರಕ್ಕೆ ಸಚಿನ್ ವಾರಿಯರ್ ಸಂಗೀತ ನೀಡಿದ್ದರು. ಆ ಹಾಡು ಕೇಳಿದ್ದ ಕಥೆಯೊಂದು ಶುರುವಾಗಿದೆ ನಿರ್ದೇಶಕ ಸನ್ನಾ ಹೆಗ್ಡೆ, ಅವರಿಂದಲೇ ತಮ್ಮ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿಸೋಕೆ ಮನಸ್ಸು ಮಾಡಿಬಿಟ್ಟರು. `ಸೆನ್ನಾ ಆಫರ್ ಬಂದಾಗ ನನಗೆ ಇನ್ನೂ ಕನ್ನಡ ಚಿತ್ರಗಳಿಗೂ ಸಂಗೀತ ನೀಡುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ಆಕಸ್ಮಿಕವಾಗಿ ಸಿಕ್ಕ ಅವಕಾಶ ಅದು. ಚಿತ್ರದ ಸ್ಕ್ರಿಪ್ಟ್ ಕೇಳಿದಾಗ, ಅದು ನಾನು ಇಷ್ಟಪಡುವಂತಹಾ ಕಥೆಯೇ ಆಗಿತ್ತು. ಹೀಗಾಗಿ ಮ್ಯೂಸಿಕ್ ಕೊಡೋಕೆ ಒಪ್ಪಿಕೊಂಡೆ' ಇದು ಸಚಿನ್ ವಾರಿಯರ್ ಮಾತು.
ಚಿತ್ರಕ್ಕೆ ಹಲವು ಟ್ಯೂನ್ ಕೊಟ್ಟಿದ್ದೇನೆ. ಕೆಲವು ಟ್ಯೂನ್‍ಗಳನ್ನು ಹಾಡುಗಳಲ್ಲಿ ಬಳಸಿಕೊಂಡಿದ್ದಾರೆ. ಇನ್ನೂ ಕೆಲವು ಟ್ಯೂನ್‍ಗಳನ್ನು ಹಿನ್ನೆಲೆ ಸಂಗೀತಕ್ಕೆ ಬಳಸಿಕೊಂಡಿದ್ದಾರೆ. ಇಂಟರ್‍ನ್ಯಾಷನಲ್ ಮ್ಯೂಸಿಕ್ ಮತ್ತು ಸ್ಥಳೀಯ ಸಂಗೀತ..ಎರಡೂ ಮಿಕ್ಸ್ ಆಗಿರುವ ಸಂಗೀತ ಚಿತ್ರದಲ್ಲಿದೆ ಎನ್ನುತ್ತಾರೆ ಸಚಿನ್ ವಾರಿಯರ್.
ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರಕ್ಕೆ ದಿಗಂತ್ ಹೀರೋ. ಪೂಜಾ ದೇವರಿಯಾ ನಾಯಕಿ. ನಾಲ್ಕು ವಯೋಮಾನದವರ ಪ್ರೇಮಕಥೆ ಹೊಂದಿರುವ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿ ಬಿಡುಗಡೆಯಾಗುವ ಮುನ್ನವೇ, ವಿದೇಶಗಳಲ್ಲಿ ಪ್ರೀಮಿಯರ್ ಶೋ ಆಯೋಜಿಸಿಲಾಗಿದೆ. ಅಷ್ಟೇ ಅಲ್ಲ, ಬಿಡುಗಡೆಗೆ ಮುನ್ನಾ ದಿನ ತಮ್ಮ ತಮ್ಮ ಪ್ರೇಮಕಥೆ ಹೇಳಿಕೊಂಡಿರುವ ಆಯ್ದ ಪ್ರೇಮಿಗಳಿಗೆ ಸಿನಿಮಾ ತೋರಿಸುವುದಕ್ಕೂ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.