ರಾಜು ಕನ್ನಡ ಮೀಡಿಯಂ. ಗುರುನಂದನ್, ಆಶಿಕಾ ರಂಗನಾಥ್ ಅಭಿನಯದ ಸಿನಿಮಾ. ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಿದ್ದ ಚಿತ್ರದ ನಿರ್ಮಾಪಕ ಕೆ.ಎ.ಸುರೇಶ್. ಆದರೆ, ಈಗ ಸುರೇಶ್ ವಿರುದ್ಧವೇ ವಂಚನೆಯ ಆರೋಪ ಕೇಳಿ ಬಂದಿದೆ.
ಚಿತ್ರದ ಸ್ಯಾಟಲೈಟ್ ರೈಟ್ಸ್‍ನ್ನು ವಿತರಕ ಜಯಣ್ಣ ಅವರಿಗೆ ಕೊಟ್ಟು, ಇನ್ನೊಂದು ಕಡೆ ಜೀ ಟಿವಿಗೂ ಹಕ್ಕುಗಳನ್ನು ಮಾರಾಟ ಮಾಡಿದ್ದಾರೆ ಅನ್ನೋದು ಅವರ ಮೇಲಿರೋ ಆರೋಪ. ಈ ಕುರಿತು ಜಯಣ್ಣ, ಹಲವು ಬಾರಿ ನಿರ್ಮಾಪಕ ಸುರೇಶ್ ಹಾಗೂ ಜೀ ಟಿವಿ ಕನ್ನಡದವರ ಗಮನಕ್ಕೆ ತಂದಿದ್ದಾರೆ. ಸೂಕ್ತ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಿದ್ದಾರೆ.
ರಾಜು ಕನ್ನಡ ಮೀಡಿಯಂ ಪ್ರಸಾರ ಮಾಡುವುದಾಗಿ ಪ್ರಚಾರ ಮಾಡಿದ್ದ ಜೀ ಟಿವಿಗೆ ಚಿತ್ರವನ್ನು ಪ್ರಸಾರ ಮಾಡದಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಸೆಪ್ಟೆಂಬರ್ ಮೊದಲ ವಾರಕ್ಕೆ ವಿಚಾರಣೆಗೆ ದಿನಾಂಕ ನಿಗದಿ ಪಡಿಸಲಾಗಿದೆ. ಅಲ್ಲಿಯವರೆಗೆ ಜೀ ಕನ್ನಡ ಚಾನೆಲ್, ರಾಜು ಕನ್ನಡ ಮೀಡಿಯಂ ಚಿತ್ರವನ್ನು ಪ್ರಸಾರ ಮಾಡುವುದಕ್ಕೆ ಅವಕಾಶವೇ ಇಲ್ಲ.