ತಮನ್ನಾ.. ಕನ್ನಡದಲ್ಲಿ ಕಾಣಿಸಿಕೊಂಡಿರೋದು ಒಂದೇ ಸಿನಿಮಾದಲ್ಲಿ. ಜಾಗ್ವಾರ್ ಚಿತ್ರದಲ್ಲಿ ಐಟಂ ಸಾಂಗ್‍ಗೆ ಹೆಜ್ಜೆ ಹಾಕಿ ಹೋದ ತಮನ್ನಾ, ಕನ್ನಡಿಗರಿಗೆ ಹತ್ತಿರವಾಗಿದ್ದು ಪುನೀತ್ ರಾಜ್‍ಕುಮಾರ್ ಜೊತೆ ಕಾಣಿಸಿಕೊಂಡ ಜಾಹೀರಾತಿನ ಮೂಲಕ. ಅದಾದ ಮೇಲೆ ಕನ್ನಡದಲ್ಲಿಯೂ ನಟಿಸುವ ಆಸೆ ವ್ಯಕ್ತಪಡಿಸಿದ್ದ ಮಿಲ್ಕಿಬ್ಯೂಟಿ, ಈಗ ಮಾಧ್ಯಮಗಳ ಮೇಲೆ ಗುರ್ರ್ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ ಇಷ್ಟೆ, ಇತ್ತೀಚೆಗೆ ತಮನ್ನಾ, ಅಮೆರಿಕದ ಡಾಕ್ಟರ್ ಒಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂದು ಗಾಸಿಪ್ ಹರಡಲಾಗಿತ್ತು. ಈ ಕುರಿತು ಸಿಟ್ಟಿನಿಂದಲೇ ಪ್ರತಿಕ್ರಿಯೆ ಕೊಟ್ಟಿದ್ದಾರೆ ತಮನ್ನಾ.
``ಮೊದಲು ಆ್ಯಕ್ಟರ್ ಜೊತೆ, ನಂತರ ಕ್ರಿಕೆಟರ್ ಜೊತೆ, ಈಗ ಡಾಕ್ಟರ್ ಜೊತೆ... ಮದುವೆಯ ಸುದ್ದಿ ಮಾಡಿದ್ದೀರಿ. ನಾನೇನು ಗಂಡನನ್ನು ಆಯ್ಕೆ ಮಾಡಿಕೊಳ್ಳೋಕೆ ಶಾಪಿಂಗ್ ಮಾಡ್ತಿದ್ದೀನಾ..? ಈ ರೂಮರ್‍ಗಳನ್ನು ಮೊದಲು ನಿಲ್ಲಿಸಿ. ನನ್ನ ವೈಯಕ್ತಿಕ ಜೀವನದ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನೆಲ್ಲ ಹಬ್ಬಿಸಬೇಡಿ. ನಾನಾಗಲೀ, ನನ್ನ ಅಪ್ಪ, ಅಮ್ಮನಾಗಲೀ ಗಂಡು ಹುಡುಕುತ್ತಿಲ್ಲ. ನನಗೆ ಈಗಲೂ ಪ್ರೀತಿ ಇರೋದು ಸಿನಿಮಾದ ಮೇಲೆ ಮಾತ್ರ. ಇಂತಹ ಸುದ್ದಿಗಳು ನಿಮಗೂ, ನನಗೂ ಗೌರವ ತರುವುದಿಲ್ಲ. ನಾನು ಮದುವೆಯಾಗುವುದಾದರೆ, ಆ ದಿನ, ಆ ಸುದ್ದಿಯನ್ನು ನಾನೇ ಜಗತ್ತಿಗೆ ಸಾರಿ ಸಾರಿ ಹೇಳುತ್ತೇನೆ. ಅಲ್ಲಿಯವರೆಗೂ ಸುಮ್ಮನಿರಿ''
ತಮ್ಮ ಮದುವೆಯ ಗಾಸಿಪ್ ಬಗ್ಗೆ ಸ್ವಲ್ಪ.. ಸ್ವಲ್ಪವೇನು ಸಂಪೂರ್ಣ ಖಾರವಾಗಿಯೇ ಪ್ರತಿಕ್ರಿಯಿಸಿರುವ ತಮನ್ನಾ, ಗಾಸಿಪ್‍ಗಳ ಬಗ್ಗೆ ತಲೆ ಕೆಡಿಸಿಕೊಂಡಿರುವುದಂತೂ ನಿಜ.