ಕುಮಾರಿ 21 F ಚಿತ್ರದ ಹೀರೋ ಪ್ರಣಾಮ್ ದೇವರಾಜ್. ಅವರಿಗಿದು ನಾಯಕರಾಗಿ ಮೊದಲ ಸಿನಿಮಾ. ಬೇರೆ ಪಾತ್ರದಲ್ಲೇನಾದರೂ ಮಾಡಿದ್ರಾ ಎಂದು ಕೇಳಬೇಡಿ. ಶೃತಿ, ರಾಮ್‍ಕುಮಾರ್ ಅಭಿನಯದ ಮನಸೋ ಓ ಮನಸೇ ಚಿತ್ರದಲ್ಲಿ ಬಾಲನಟರಾಗಿ ಕಾಣಿಸಿಕೊಂಡಿದ್ದಾರಂತೆ ಪ್ರಣಾಮ್ ದೇವರಾಜ್. ಹೀರೋ ಆಗಿ ನಟಿಸುತ್ತಿರುವ ಮೊದಲ ಚಿತ್ರವೇ ರೀಮೇಕ್ ಯಾಕೆ..? ಮೊದಲ ಉತ್ತರ ವಿಭಿನ್ನ ಕಥೆ, ಎರಡನೇ ಕಾರಣ ಏನ್ ಗೊತ್ತಾ..? ಈ ಸಿನಿಮಾ ಪ್ರಣಾಮ್ ಅವರನ್ನು ಒಂದ್ಸಲ ಅಲ್ಲ, 4 ಸಲ ಹುಡುಕಿಕೊಂಡು ಬಂದಿದ್ಯಂತೆ.
ಮೊದಲು ಬಂದವರ ಬಳಿ ಪ್ರಣಾಮ್, ಚಿತ್ರದಲ್ಲಿ ಸ್ವಲ್ಪ ಆ್ಯಕ್ಷನ್ ಸೇರಿಸಿದ್ರೆ ಚೆನ್ನಾಗಿರುತ್ತೆ ಎಂದರಂತೆ. ಖಂಡಿತಾ ಸರ್, ಮತ್ತೆ ಬರ್ತೀವಿ ಎಂದು ಹೋದವರು ಬರಲೇ ಇಲ್ಲವಂತೆ. ಅದಾದ ಮೇಲೆ ಇನ್ನಿಬ್ಬರು ಇದೇ ಚಿತ್ರಕ್ಕೆ ಆಫರ್ ಕೊಟ್ಟರಂತೆ. ಇದಾದ ಮೇಲೆ ಸುಕುಮಾರ್, ಒಂದ್ಸಲ ದೇವರಾಜ್ ಅವರಿಗೇ ಫೋನ್ ಮಾಡಿ, ನಮ್ಮ ಅಸೋಸಿಯೇಟ್ ಶ್ರೀಮಾನ್ ಬರುತ್ತಾರೆ. ಅವರ ಜೊತೆ ಮಾತನಾಡಿ ಎಂದರಂತೆ. ಅವರು ಬಂದಿದ್ದು ಕೂಡಾ ಇದೇ ಕುಮಾರಿ 21 F ಕಥೆ ಹಿಡಿದುಕೊಂಡು. ಯಾಕೋ ಈ ಸ್ಟೋರಿ ಪದೇ ಪದೇ ನನ್ನ ಹತ್ತಿರಾನೇ ಬರ್ತಿದ್ಯಲ್ಲ ಎಂದು ಒಪ್ಪಿಕೊಂಡೆ ಎಂದು ಹೇಳಿಕೊಂಡಿದ್ದಾರೆ ಪ್ರಣಾಮ್ ದೇವರಾಜ್.
ಚಿತ್ರದಲ್ಲಿ ರೊಮ್ಯಾಂಟಿಕ್ ದೃಶ್ಯಗಳು ಹಾಗೂ ಉದ್ದುದ್ದದ ಡೈಲಾಗ್ ಹೇಳುವ ಸೀನ್‍ಗಳು ಕಷ್ಟವಾದವು. ಅದು ಬಿಟ್ಟರೆ, ಶ್ರೀಮಾನ್, ನನ್ನನ್ನು ಸೋದರನಂತೆ ನೋಡಿಕೊಂಡರು ಎಂದು ಹೇಳಿದ್ದಾರೆ ಪ್ರಣಾಮ್ ದೇವರಾಜ್. ಕುಮಾರಿ 21 F ಪ್ರತಿಯೊಬ್ಬ ಹುಡುಗ, ಹುಡುಗಿ ನೋಡಲೇಬೇಕಾದ ಸಿನಿಮಾ ಅಂತಾರೆ ಪ್ರಣಾಮ್.