ಇದು ನನ್ನೂರು. ಚಿನ್ನಸ್ವಾಮಿ ಸ್ಟೇಡಿಯಂಗಿಳಿದು ಬ್ಯಾಟ್ ಹಿಡಿದ್ರೆ, ಫೋರ್, ಸಿಕ್ಸ್ ಸುರಿಮಳೆ ಆಗುತ್ತೆ. ಇದು ಸೆಹ್ವಾಗ್ ಕೋಟೆ ಕಣೋ..
ಆರ್ಮುಗಂ ಸ್ಟೈಲಲ್ಲಿ ಸೆಹ್ವಾಗ್ ಅಬ್ಬರಿಸುತ್ತಿದ್ದರೆ, ಕೆಸಿಸಿ ಸುದ್ದಿಗೋಷ್ಟಿಯಲ್ಲಿದ್ದರ ಮುಖದಲ್ಲೆಲ್ಲ ನಗುವೋ ನಗು. ಕೆಸಿಸಿ ಟೂರ್ನಿಯಲ್ಲಿ ಈ ಬಾರಿ ಕನ್ನಡ ಸಿನಿಮಾ ನಟರೊಂದಿಗೆ ಸೆಹ್ವಾಗ್ ಕೂಡಾ ಪಾಲ್ಗೊಳ್ಳುತ್ತಿದ್ದಾರೆ.
ನಾನು ಕನ್ನಡ ಸಿನಿಮಾ ನೋಡಿಲ್ಲ. ಆದರೆ ಸುದೀಪ್ ಅಭಿನಯದ ಮಕ್ಕಿ (ಈಗ ಚಿತ್ರದ ಹಿಂದಿ ವರ್ಷನ್) ನೋಡಿದ್ದೇನೆ. ಅದುವರೆಗೆ ಸುದೀಪ್ ಒಬ್ಬ ಸೂಪರ್ ಸ್ಟಾರ್ ಎನ್ನುವುದೇ ನನಗೆ ಗೊತ್ತಿರಲಿಲ್ಲ. ಅದಾದ ಮೇಲೆ ಪರಿಚಯವಾಯ್ತು. ಈಗ ಇಲ್ಲಿಗೆ ತಂದಿಟ್ಟಿದೆ. ಕನ್ನಡ ಕಲಿತುಕೊಳ್ಳುವ ಆಸಕ್ತಿಯೂ ಇದೆ ಎಂದರು ಸೆಹ್ವಾಗ್. ಭಾಷೆ ಕಲಿಯುವ ವಿಚಾರದಲ್ಲಿ ಸೆಹ್ವಾಗ್‍ಗೆ ಮೊದಲಿನಿಂದಲೂ ಆಸಕ್ತಿ ಇರುವುದು ಗುಟ್ಟಿನ ವಿಷಯವೇನಲ್ಲ.
ದ್ರಾವಿಡ್, ಕುಂಬ್ಳೆಯವರಿಂದ ಕನ್ನಡದ ಪರಿಚಯವಿದೆ. ಅವರು ಕನ್ನಡದಲ್ಲಿ ಮಾತನಾಡಿಕೊಳ್ಳೋದನ್ನು ಕೇಳಿದ್ದೇನೆ. ಸ್ವಲ್ಪ ಸ್ವಲ್ಪ ಅರ್ಥವಾಗುತ್ತೆ. ಮಾತನಾಡೋದು ಕಷ್ಟ ಎಂದು ಕನ್ನಡದ ಕಥೆ ಹೇಳಿಕೊಂಡರು ಸೆಹ್ವಾಗ್.
ಮುಂದೊಂದು ದಿನ ನಾನು ಕನ್ನಡ ಸಿನಿಮಾ ನಿರ್ಮಿಸಿದರೂ ಅಚ್ಚರಿಯಿಲ್ಲ ಎಂದಿದ್ದಾರೆ ಸೆಹ್ವಾಗ್.