ತಮಿಳು, ತೆಲುಗಿಗೆ ಹೋಲಿಸಿದರೆ, ಸುಹಾಸಿನಿ ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಚಿತ್ರಗಳಲ್ಲಿ. ಆದರೆ, ನಟಿಸಿದ ಚಿತ್ರಗಳೆಲ್ಲವೂ ಒಂದಕ್ಕಿಂತ ಒಂದು ವಿಭಿನ್ನ. ವಿಶೇಷ. ಬೆಂಕಿಯಲ್ಲಿ ಅರಳಿದ ಹೂವು, ಬಂಧನ, ಮುತ್ತಿನ ಹಾರ, ಅಮೃತವರ್ಷಿಣಿ, ಸುಪ್ರಭಾತ, ಹಿಮಪಾತ, ಹೊಸ ನೀರು, ಹೆಂಡ್ತಿಗೇಳ್ತೀನಿ.. ಹೀಗೆ ಹಲವು ವಿಶೇಷಗಳಿವೆ. ಆದರೆ, ಈಗಲೂ ಸುಹಾಸಿನಿಗೆ ಕಾಡೋದು ಬಂಧನ ಚಿತ್ರದ ನಂದಿನಿ ಪಾತ್ರವಂತೆ.
ಅಂದಹಾಗೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಸುಹಾಸಿನಿ ಪಾತ್ರದ ಹೆಸರು ನಂದಿನಿ. ಚಿತ್ರದಲ್ಲಿ ನಟಿಸೋವಾಗ ಬಂಧನದ ನಂದಿನಿ ನೆನಪಾಗುತ್ತಲೇ ಇದ್ದಳು ಅಂತಾರೆ ಸುಹಾಸಿನಿ. ಅಂಬರೀಷ್ ಆತ್ಮೀಯ ಸ್ನೇಹಿತ. ಪತಿ ಮಣಿರತ್ನಂ, ಚಿಕ್ಕಪ್ಪ ಕಮಲ್‍ಹಾಸನ್ ಅವರಿಗೂ ಆಪ್ತರು. ಆದರೆ, ಅವರ ಜೊತೆ ನಟಿಸಿದ್ದು ಎರಡೇ ಸಿನಿಮಾಗಳಲ್ಲಿ. ಶಾಟ್ ಶುರುವಾಗುವವರೆಗೆ ತಮಾಷೆ ಮಾಡುತ್ತಾ, ಕ್ಯಾಮೆರಾ ಆನ್ ಆದೊಡನೆ ಸೀರಿಯಸ್ ಆಗುವ ಅಂಬರೀಷ್ ಸದಾ ನಗುತ್ತಾ, ನಗಿಸುತ್ತಾ ಇರುವ ವ್ಯಕ್ತಿ ಅಂತಾರೆ ಸುಹಾಸಿನಿ.
ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಸುಹಾಸಿನಿ ಅವರ ಮಗನಿಗಿಂತ ಕಿರಿಯ ವಯಸ್ಸಿನ ನಿರ್ದೇಶಕನ ಜೊತೆ ಕೆಲಸ ಮಾಡುತ್ತಿದ್ದಾರೆ. ಅದೇ ನನಗೆ ಸ್ಪೆಷಲ್. ಚಿತ್ರದ ಪಾತ್ರವೂ ಸ್ಪೆಷಲ್ಲಾಗಿಯೇ ಇದೆ ಅಂತಾರೆ ಸುಹಾಸಿನಿ.
ಚಿತ್ರದಲ್ಲಿ ಯಂಗ್ ಸುಹಾಸಿನಿಯಾಗಿ ಶೃತಿ ಹರಿಹರನ್ ನಟಿಸುತ್ತಿದ್ದು, ಯಂಗ್ ಅಂಬರೀಷ್ ಆಗಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಗುರುದತ್ ಗಾಣಿಗ ಎಂಬ ಯುವಕನಿಗೆ ಇದು ಪ್ರಥಮ ಚಿತ್ರ. ಆತನ ಪ್ರತಿಭೆಯ ಮೇಲೆ ನಂಬಿಕೆಯಿಟ್ಟು ಅವಕಾಶ ಕೊಟ್ಟಿರುವುದು ಸುದೀಪ್. ಇದು ಜಾಕ್ ಮಂಜು ನಿರ್ಮಾಣದ ಸಿನಿಮಾ.