ಕಥೆಯೊಂದು ಶುರುವಾಗಿದೆ... ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವುದು ಆಗಸ್ಟ್ 3ರಂದು. ಆಗಸ್ಟ್ 2ರಂದು ಬೆಂಗಳೂರಿನ ಮಾಲ್‍ವೊಂದರಲ್ಲಿ ನಾಲ್ಕು ವಯೋಮಾನದ ಅದೃಷ್ಟವಂತ ಪ್ರೇಮಿಗಳಿಗಾಗಿ ಪ್ರೀಮಿಯರ್ ಶೋ ಆಯೋಜಿಸಿದೆ. ಅದಕ್ಕಾಗಿ ವಿಶೇಷ ಸ್ಪರ್ಧೆಯೊಂದನ್ನೂ ಹಮ್ಮಿಕೊಂಡಿರುವ ಚಿತ್ರತಂಡ, ಈಗ ಇನ್ನೊಂದು ದಾಖಲೆ ಮಾಡಲು ಹೊರಟಿದೆ. ಅದು ವಿದೇಶದಲ್ಲಿ.
ಜುಲೈ 27 ಹಾಗೂ 28ರಂದು ಯೂರೋಪ್, ಅಮೆರಿಕ, ಆಸ್ಟ್ರೇಲಿಯ, ಸಿಂಗಾಪುರ್, ಬ್ರಿಟನ್, ಮಲೇಷ್ಯಾಗಳಲ್ಲಿ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಿದೆ. ಮೊದಲು ಭಾರತದಲ್ಲಿ ಬಿಡುಗಡೆ ಮಾಡಿ, ನಂತರ ವಿದೇಶಕ್ಕೆ ಹೋಗಲು ಯೋಜಿಸಿದ್ದ ಚಿತ್ರತಂಡ, ನಂತರ ಅದನ್ನೇ ಉಲ್ಟಾ ಮಾಡಿದೆ. ವಿದೇಶದಿಂದಲೇ ಸಿನಿಮಾ ಅಭಿಯಾನ ಆರಂಭಿಸಿದೆ. ಇದು ಕನ್ನಡಕ್ಕೆ ಹೊಸದು ಹಾಗೂ ವಿಭಿನ್ನ ಪ್ರಯತ್ನ. ಇದು ಯಶಸ್ವಿಯಾದರೆ, ಕನ್ನಡ ಚಿತ್ರರಂಗದ ಮಾರುಕಟ್ಟೆ ಹಿಗ್ಗಲಿದೆ ಎಂದು ಬೇರೆ ಹೇಳಬೇಕಿಲ್ಲ.
ಇದು ಸನ್ನಾ ಹೆಗಡೆ ನಿರ್ದೇಶನದ ಮೊದಲ ಸಿನಿಮಾ. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾದಲ್ಲಿ ದಿಗಂತ್ ಹೀರೋ, ಪೂಜಾ ದೇವರಿಯಾ ನಾಯಕಿ. ವಿಭಿನ್ನ ವಯೋಮಾನದವರ ಪ್ರೇಮ ಕಥೆ ಹೇಳುವ ಸಿನಿಮಾ, ಬಿಡುಗಡೆಗೆ ಸಿದ್ಧಗೊಂಡಿದೆ.