ಆ ಕರಾಳ ರಾತ್ರಿ. ಇದೇ ವಾರ ಬಿಡುಗಡೆಯಾದ ದಯಾಳ್ ಪದ್ಮನಾಭನ್‍ರ ಸಿನಿಮಾ, ಸದ್ದಿಲ್ಲದೆ ಹಿಟ್ ಆಗಿಬಿಟ್ಟಿದೆ. ಕಥೆ, ಚಿತ್ರಕಥೆಯೇ ಬಂಡವಾಳವಾಗಿರುವ ಸಸ್ಪೆನ್ಸ್, ಥ್ರಿಲ್ಲರ್ ಕತೆ ಪ್ರೇಕ್ಷಕರಿಗೆ ಇಷ್ಟವಾಗಿಹೋಗಿದೆ. ಚಿತ್ರದ ಬಗ್ಗೆ ಬಹುತೇಕ ಎಲ್ಲ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಒಳ್ಳೆಯ ವಿಮರ್ಶೆಗಳೇ ಬಂದವು. ಇದೂ ಕೂಡಾ ಚಿತ್ರಕ್ಕೆ ನೆರವಾಗಿದೆ.
ಮೊದಲ ವಾರದ ಕಲೆಕ್ಷನ್ 1 ಕೋಟಿಯ ಸಮೀಪ ಇದೆ. ಅಷ್ಟೇ ಅಲ್ಲ, ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚುತ್ತಿದೆ. ಒಂದು ಚಿತ್ರ ಹಿಟ್ ಎನ್ನೋಕೆ ಇವಿಷ್ಟೇ ಕಾರಣಗಳು ಸಾಕೇನೋ..
ನನ್ನ ಇದುವರೆಗಿನ ಸಿನಿಮಾಗಳಲ್ಲಿಯೇ ಅತೀ ಹೆಚ್ಚು ಮೊತ್ತದ ಟಿವಿ ರೈಟ್ಸ್ ಬರುತ್ತಿರುವ ಸಿನಿಮಾ ಇದು. ಈಗಾಗಲೇ ತಮಿಳು ಹಾಗೂ ತೆಲುಗಿಗೆ ರೀಮೇಕ್ ಹಕ್ಕುಗಳಿಗೆ ಬೇಡಿಕೆ ಬಂದಿದೆ. ರೀಮೇಕ್ ಯಾರೇ ಮಾಡಲಿ, ಅದನ್ನು ಕನ್ನಡದ ಕಥೆ ಎಂದು ಅವರ ಟೈಟಲ್ ಕಾರ್ಡ್‍ನಲ್ಲಿ ತೋರಿಸಬೇಕು. ಕಥೆ ಚಿತ್ರಕಥೆ ಬರೆದವರ ಹೆಸರು ಹಾಕಲೇಬೇಕು ಎನ್ನುವುದು ನನ್ನ ಕಂಡೀಷನ್. ಮಾತುಕತೆ ನಡೆಯುತ್ತಿವೆ ಎಂದಿದ್ದಾರೆ ದಯಾಳ್.
ಜೆಕೆ, ಅನುಪಮಾ ಗೌಡ, ರಂಗಾಯಣ ರಘು, ವೀಣಾ ಸುಂದರ್, ನವೀನ್ ಕೃಷ್ಣ ಎಲ್ಲರಿಗೂ ಈಗ ಅಪರೂಪದ ಸಂಭ್ರಮ. ಸಿನಿಮಾ ರಿಲೀಸ್ ಆದ ಮೇಲೆ ಚಿತ್ರವನ್ನು ಪ್ರೇಕ್ಷಕರೇ ಪ್ರಚಾರ ಮಾಡುತ್ತಿರುವುದು ಚಿತ್ರತಂಡದ ಖುಷಿ ಇಮ್ಮಡಿಗೊಳ್ಳೋಕೆ ಕಾರಣ.