ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಚಿತ್ರೀಕರಣಕ್ಕೆ ಬಾಗಲಕೋಟೆಯಲ್ಲಿ ಅಪಸ್ವರ ಕೇಳಿಬಂದಿದೆ. ಬಾಗಲಕೋಟೆಯ ಬಾದಾಮಿಯಲ್ಲಿರೋ ಮಹಾಕೂಟೇಶ್ವರ ಪುಷ್ಕರಿಣಿಯಲ್ಲಿ ನಟಸಾರ್ವಭೌಮ ಚಿತ್ರತಂಡ ಸೆಟ್ ಹಾಕಿ ಚಿತ್ರೀಕರಣ ಮಾಡುತ್ತಿದೆ. ಆದರೆ, ಈ ಶೂಟಿಂಗ್ ವೇಳೆ ಪುಷ್ಕರಣಿಯಲ್ಲಿರುವ ನೀರನ್ನು ಹೊರಹಾಕಿ ಸೆಟ್ ಹಾಕಲಾಗಿದೆ ಅನ್ನೋದು ಗ್ರಾಮಸ್ಥರ ಆರೋಪ. ಏಕೆಂದರೆ, ಈ ಪುಷ್ಕರಣಿ, ಸ್ಥಳೀಯರಿಗೆ ಜಲಮೂಲ. ಈ ಪುಷ್ಕರಣಿಯಲ್ಲಿ ನೀರು ಬತ್ತುವುದಿಲ್ಲ. ಈ ಪುಷ್ಕರಣಿಯಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಚೆನ್ನಾಗಿದೆ.
ಹೀಗಿರುವಾಗ ಪುಷ್ಕರಣಿಯನ್ನು ಡಿಗ್ಗಿಂಗ್ ಮಾಡಿ, ನೀರನ್ನು ಹೊರತೆಗೆದು ಸೆಟ್ ಹಾಕಿದರೆ, ಅಂತರ್ಜಲಕ್ಕೆ ಸಮಸ್ಯೆಯಾಗುತ್ತೆ ಅನ್ನೋದು ಸ್ಥಳೀಯರ ಆತಂಕ. ಈ ಕುರಿತು ನಿರ್ದೇಶಕ ಪವನ್ ಒಡೆಯರ್ ಸ್ಪಷ್ಟನೆ ಕೊಟ್ಟಿದ್ದಾರೆ. ಐತಿಹಾಸಿಕ ಸ್ಥಳಗಳ ಬಗ್ಗೆ ನಮಗೂ ಗೌರವ ಇದೆ. ಕಾಳಜಿ ಇದೆ. ಈ ಪ್ರದೇಶವನ್ನು ಇನ್ನಷ್ಟು ಚೆನ್ನಾಗಿ ತೋರಿಸಬೇಕು ಅನ್ನೋದು ನಮ್ಮ ಆಸೆ. ಪುಷ್ಕರಣಿಗೆ, ಅಂತರ್ಜಲಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ, ಆತಂಕ ಬೇಡ ಎಂದು ಭರವಸೆ ಕೊಟ್ಟಿದ್ದಾರೆ.