` ಮಹಾರಾಷ್ಟ್ರ ಮಲ್ಟಿಪ್ಲೆಕ್ಸ್ ಕಾನೂನು ಕರ್ನಾಟಕಕ್ಕೂ ಬರಲಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
maharasthra government allow outside food in multiplex
Maharashtra Multiplex

ಮಲ್ಟಿಪ್ಲೆಕ್ಸ್‍ಗಳಿಗೆ ಸಿನಿಮಾ ನೋಡಲು ಹೋಗುವವರಿಗೆ ಶಾಕ್ ಕೊಡೋದು ಅಲ್ಲಿನ ತಿಂಡಿ, ತಿನಿಸು, ಪಾನೀಯಗಳ ಬೆಲೆ. ಹೊರಗೆ ಹತ್ತಿಪ್ಪತ್ತು ರೂಪಾಯಿಗಳಲ್ಲಿ ಸಿಗುವ ಆಹಾರ, ಪಾನೀಯ ಮಲ್ಟಿಪ್ಲೆಕ್ಸ್ ಒಳಗೆ 200/300 ರೂ. ಇರುತ್ತೆ. ಐದು ಜನರ ಕುಟುಂಬವೊಂದು ಮಲ್ಟಿಪ್ಲೆಕ್ಸ್‍ಗೆ ಹೋಗಿ, ಸಿನಿಮಾ ನೋಡಿ ಬಂದರೆ ಮಿನಿಮಮ್ 2 ಸಾವಿರ ರೂಪಾಯಿ ಕೈಬಿಟ್ಟಂತೆಯೇ ಲೆಕ್ಕ. ಟಿಕೆಟ್ ದರವೂ ದುಬಾರಿ. ತಿಂಡಿ ತಿನಿಸುಗಳೂ ದುಬಾರಿ. ಈಗ ಮಹಾರಾಷ್ಟ್ರದಲ್ಲಿ ಅವುಗಳಿಗೆ ಬ್ರೇಕ್ ಹಾಕುವ ಮೊದಲ ಹೆಜ್ಜೆ ಇಡಲಾಗಿದೆ.

ಮಹಾರಾಷ್ಟ್ರ ಸರ್ಕಾರ, ಮಲ್ಟಿಪ್ಲೆಕ್ಸ್‍ಗಳಲ್ಲಿ ಮನೆಯಿಂದ ತೆಗೆದುಕೊಂಡು ಹೋದ ತಿಂಡಿ ತಿನಿಸು, ಪಾನೀಯಗಳಿಗೆ ನಿರ್ಬಂಧ ಹೇರುವಂತಿಲ್ಲ ಎಂದು ಸೂಚನೆ ಕೊಟ್ಟಿದೆ. ಅರ್ಥಾತ್, ಮುಂಬೈ ಅಥವಾ ಮಹಾರಾಷ್ಟ್ರದಲ್ಲಿ ನೀವು ಮಲ್ಟಿಪ್ಲೆಕ್ಸ್‍ಗಳಿಗೆ ಹೋದರೆ, ನೀವೇ ಮನೆಯಿಂದ ಅಥವಾ ಹೊರಗೆ ಖರೀದಿಸಿದ ತಿಂಡಿ, ತಿನಿಸು, ಪಾನೀಯಗಳನ್ನು ಕೊಂಡೊಯ್ಯಬಹುದು. ಮನೆಯಿಂದ ಅಥವಾ ಹೊರಗಿನಿಂದ ತಂದ ಆಹಾರ, ಪಾನೀಯಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡುಗಳಿಗೆ ಅಲ್ಲಿನ್ನು ಬೆಲೆಯಿಲ್ಲ.

ಬಾಂಬೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಈ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿಯೂ ಈ ಆದೇಶ ಜಾರಿಗೆ ಬರಬಾರದೇ ಎಂದು ಪ್ರೇಕ್ಷಕರು ಪ್ರಾರ್ಥಿಸುವಂತಾಗಿದೆ. ಆದರೆ, 200 ರೂ. ಟಿಕೆಟ್ ಆದೇಶವನ್ನೇ ಕಸದಬುಟ್ಟಿಗೆ ಎಸೆದಿರುವ ಮಲ್ಟಿಪ್ಲೆಕ್ಸ್‍ಗಳಿಗೆ ಕರ್ನಾಟಕದಲ್ಲಿ ಕಡಿವಾಣ ಹಾಕುವವರು ಸದ್ಯಕ್ಕಂತೂ ಯಾರೂ ಇಲ್ಲ.