ಶಿಲ್ಪಾ ಗಣೇಶ್... ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ, ಚಿತ್ರ ನಿರ್ಮಾಪಕಿ. ಇದೆಲ್ಲದರ ಜೊತೆಗೆ ರಾಜಕಾರಣಿಯೂ ಹೌದು. ಹೀಗಾಗಿ ಆಗಾಗ್ಗೆ ರಾಜಕೀಯ ಕಿಡಿಗೇಡಿಗಳು ಮಸಿ ಬಳಿಯುವ ಕೆಲಸ ಮಾಡ್ತಾನೇ ಇರ್ತಾರೆ. ಈ ಬಾರಿಯೂ ಹಾಗೆಯೇ ಆಗಿದೆ. ಶಿಲ್ಪಾ ಗಣೇಶ್ ಹೆಸರು ದುರುಪಯೋಗಪಡಿಸಿಕೊಂಡು ಕೆಲವು ಕಿಡಿಗೇಡಿಗಳು ವಿವಾದದ ಬೆಂಕಿ ಹಚ್ಚೋ ಪ್ರಯತ್ನ ಮಾಡಿದ್ದಾರೆ.
ಕೆಂಪೇಗೌಡರಿಗಿಂತ ಸಾಧನೆ ಮಾಡಿದ ಅನೇಕರು ನಮ್ಮಲ್ಲಿದ್ದಾರೆ. ಸಿಲ್ಕ್ ಯುನಿವರ್ಸಿಟಿಗೆ ಕೆಂಪೇಗೌಡರ ಹೆಸರು ಇಡುವ ಅವಶ್ಯಕತೆ ಇರಲಿಲ್ಲ ಎಂದು ಶಿಲ್ಪಾ ಗಣೇಶ್ ಟ್ವೀಟ್ ಮಾಡಿದ್ದಾರೆ ಅನ್ನೋ ಸುದ್ದಿ ಹರಡಿತ್ತು. ಕೆಲವರಂತೂ ಶಿಲ್ಪಾ ಗಣೇಶ್ ಅವರನ್ನು ತರಾಟೆಗೆ ತೆಗೆದುಕೊಂಡುಬಿಟ್ಟರು.
ವಾಸ್ತವ ಏನಾಗಿತ್ತೆಂದರೆ, ಅದು ಶಿಲ್ಪಾ ಗಣೇಶ್ ಅವರ ಖಾತೆಯೇ ಆಗಿರಲಿಲ್ಲ. ಶಿಲ್ಪಾ ಗಣೇಶ್ ಅವರ ಫೋಟೋ, ಹೆಸರು ಬಳಸಿ ಸೃಷ್ಟಿಸಿದ್ದ ನಕಲಿ ಖಾತೆಯಾಗಿತ್ತು. ತಕ್ಷಣ ಶಿಲ್ಪಾ ಗಣೇಶ್, ರಾಜರಾಜೇಶ್ವರಿನಗರದ ಸೈಬರ್ ಕ್ರೈಂ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಕೆಂಪೇಗೌಡರನ್ನು ಅಪಾರವಾಗಿ ಗೌರವಿಸುವ ನಾನು ಇಂತಹ ಹೇಳಿಕೆ ನೀಡುತ್ತೇನೆಂದು ನಂಬೋಕೆ ಸಾಧ್ಯವೇ ಎಂದಿರುವ ಶಿಲ್ಪಾ, ಕಿಡಿಗೇಡಿಗಳ ಮುಖ ನೋಡೋಕೆ ಕಾಯುತ್ತಿದ್ದಾರಂತೆ.