ನಿರ್ದೇಶಕ ಪ್ರೇಮ್ ಮೇಲೆ ಒಂದು ಕಂಪ್ಲೇಂಟ್ ಇದೆ. ಅವರು ಬಿಲ್ಡಪ್ ಜಾಸ್ತಿ ಕೊಡ್ತಾರೆ ಅನ್ನೋದು. ನಮ್ಮ ಸಿನಿಮಾಗೆ ನಾವೇ ಬಿಲ್ಡಪ್ ಕೊಡದೇ ಇದ್ರೆ ಇನ್ಯಾರ್ ಕೊಡ್ತಾರೆ ಅನ್ನೋದು ಪ್ರೇಮ್ ಅವರ ಸಮರ್ಥನೆ. ಆದರೆ, ದಿ ವಿಲನ್ ಟೀಸರ್ನಲ್ಲಿ ಬಿಲ್ಡಪ್ನ್ನೂ ಆಚೆಗಿಟ್ಟು ಪ್ರೇಮ್ ಗೆದ್ದಿರುವುದು ವಿಶೇಷ.
ಟೀಸರ್ ಎಂದರೆ, ಚಿತ್ರದ ಬಗ್ಗೆ ಕುತೂಹಲ, ನಿರೀಕ್ಷೆ ಹೆಚ್ಚಿಸುವಂತಿರಬೇಕು. ಶೋಕೇಸ್ನಲ್ಲಿರುವ ಬೊಂಬೆಯ ಹಾಗೆ. ಅಷ್ಟರಮಟ್ಟಿಗೆ ಟೀಸರ್ ಗೆದ್ದಿದೆ.
ಶಿವರಾಜ್ಕುಮಾರ್ ಮತ್ತು ಸುದೀಪ್ಗೆ ಪ್ರತ್ಯೇಕ ಟೀಸರ್ ಕೊಟ್ಟಿರುವ ಪ್ರೇಮ್, ರಾಮ, ರಾವಣರ ಕಥೆ ಹೇಳುತ್ತಿದ್ದಾರಾ..? ರಾಮ ಯಾರು..? ರಾವಣ ಯಾರು..? ಕುತೂಹಲ ಹೆಚ್ಚಿದೆ.
ಕಣ್ಣು, ಧ್ವನಿಗಳ ಮೂಲಕ ನಟಿಸುತ್ತಿದ್ದ ಸುದೀಪ್, ಈ ಬಾರಿ ಬೆರಳುಗಳ ಮೂಲಕವೂ ನಟಿಸಿರೋದು ಸ್ಪೆಷಲ್. ಶಿವರಾಜ್ಕುಮಾರ್ ಕೂಡಾ ಅಷ್ಟೆ...ಕಣ್ಣಲ್ಲೇ ಬೆಂಕಿಯುಂಡೆ. ಟೀಸರ್ನಲ್ಲಿ ಗೆದ್ದಿರುವ ಪ್ರೇಮ್, ಸಿನಿಮಾದಲ್ಲೂ ಗೆಲ್ಲಲಿ. ಏಕೆಂದರೆ, ಇದು ಕನ್ನಡ ಚಿತ್ರರಂಗವೇ ಬಹುನಿರೀಕ್ಷೆಯಿಂದ ಎದುರು ನೋಡುತ್ತಿರುವ ಸಿನಿಮಾ. ಸಿ.ಆರ್.ಮನೋಹರ್ ನಿರ್ಮಾಣದ ಚಿತ್ರದಲ್ಲಿ ಆ್ಯಮಿ ಜಾಕ್ಸನ್ ನಾಯಕಿ. ಸಿನಿಮಾ ಆಗಸ್ಟ್ನಲ್ಲೇ ತೆರೆಗೆ ಬಂದರೂ ಅಚ್ಚರಿಯಿಲ್ಲ ಎನ್ನಲಾಗಿದೆ.