18 ವರ್ಷಗಳ ಹಿಂದೆ, ಪಾರ್ವತಮ್ಮ ರಾಜ್‍ಕುಮಾರ್ ಅವರ ಅಮೃತಹಸ್ತದಿಂದ ಆರಂಭಗೊಂಡ, ನಿಮ್ಮ ಚಿತ್ರಲೋಕ ಡಾಟ್ ಕಾಮ್‍ಗೆ ಇಂದು 19ನೇ ಹುಟ್ಟುಹಬ್ಬ. ಗೂಗಲ್ ಕೂಡಾ ಕಣ್ಣು ಬಿಡದೇ ಇದ್ದ ದಿನಗಳಲ್ಲಿ, ಇಂಟರ್‍ನೆಟ್ ಎನ್ನುವುದು ಪ್ರಪಂಚದ 8ನೇ ಅದ್ಭುತವೇನೋ ಎಂದುಕೊಂಡಿದ್ದ ಆ ಶೈಶವಾವಸ್ಥೆಯ ದಿನಗಳಲ್ಲಿ ಹುಟ್ಟಿಕೊಂಡ ವೆಬ್‍ಸೈಟು ಚಿತ್ರಲೋಕ ಡಾಟ್ ಕಾಮ್.
ಚಿತ್ರಲೋಕ ವೆಬ್‍ಸೈಟ್ ಶುರು ಮಾಡಿದಾಗ, ಕನ್ನಡದ ಹಲವು ಪತ್ರಿಕೆಗಳು ಅಂತರ್ಜಾಲ ಆವೃತ್ತಿಯನ್ನು ಕೂಡಾ ಹೊಂದಿರಲಿಲ್ಲ. ಆ ಕಾಲದಲ್ಲೇ ಕನ್ನಡ ಚಿತ್ರರಂಗದ ಅಪರೂಪದ ಸುದ್ದಿಗಳನ್ನು, ಫೋಟೋಗಳನ್ನು, ವಿಡಿಯೋಗಳನ್ನು ಕನ್ನಡಿಗರ ಮುಂದಿಟ್ಟಿದ್ದು ಚಿತ್ರಲೋಕ ಡಾಟ್ ಕಾಮ್.
ಕನ್ನಡ ಓದುಗರ ವಲಯದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ಚಿತ್ರಲೋಕ, ನಂಬರ್ ಒನ್ ಕನ್ನಡ ಸಿನಿಮಾ ವೆಬ್‍ಸೈಟ್ ಕೂಡಾ ಹೌದು. ಇದು ಸಾಧ್ಯವಾಗಿರುವುದು ಸಹೃದಯಿ ಓದುಗರಿಂದ. ಚಿತ್ರಲೋಕದ ಅಪರೂಪದ ಛಾಯಾಚಿತ್ರ ಪ್ರದರ್ಶನ ಲಿಮ್ಕಾ ದಾಖಲೆ ಪುಸ್ತಕದಲ್ಲಿದೆ. ಒಂದಲ್ಲ ಎರಡು ದಾಖಲೆಗಳು ಲಿಮ್ಕಾ ದಾಖಲೆ ಪುಸ್ತಕದಲ್ಲಿವೆ.
ಉದ್ಯಮದಲ್ಲಿ ಚಿತ್ರಲೋಕಕ್ಕೆ ತನ್ನದೇ ಆದ ವಿಶಿಷ್ಟ ಗೌರವವಿದೆ. ಸ್ಥಾನಮಾನವಿದೆ. ಇವೆಲ್ಲದರ ಜೊತೆಗೆ ಕನ್ನಡಿಗರ ಹೃದಯದಲ್ಲಿ ಚಿತ್ರಲೋಕಕ್ಕೊಂದು ಶಾಶ್ವತ ಸ್ಥಾನ ಸಿಕ್ಕಿದೆ. ಈ ಪ್ರೀತಿ ಹೀಗೆಯೇ ಮುಂದುವರೆಯಲಿ.
ನಿಮ್ಮವ
ಕೆ.ಎಂ.ವೀರೇಶ್
ಚಿತ್ರಲೋಕ ಡಾಟ್ ಕಾಮ್ ಸಂಪಾದಕರು