ಸೆಲಬ್ರಿಟಿಗಳು ಸಮಾಜಸೇವೆಯತ್ತ ಮುಖಮಾಡುವುದು ಹೊಸದೇನೂ ಅಲ್ಲ. ಹಲವು ಕಲಾವಿದರು, ಅನಾಥಾಶ್ರಮಗಳು, ವೃದ್ಧಾಶ್ರಮಗಳಿಗೆ ನೆರವು ನೀಡುವ, ಕೆಲವರು ಸ್ವತಃ ನಡೆಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಕುಡಿಯುವ ನೀರು ಪೂರೈಕೆ, ಕೆರೆಗಳ ಅಭಿವೃದ್ದಿಗೆ ಮುಂದಾಗುತ್ತಾರೆ.ಆದರೆ, ನೀನಾಸಂ ಸತೀಶ್, ಸಮಾಜ ಸೇವೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಹಳ್ಳಿಯೊಂದನ್ನು ದತ್ತು ಪಡೆದಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಳ್ಳೆಗಾಲ ಅನ್ನೋ ಹಳ್ಳಿಯನ್ನ ನೀನಾಸಂ ಸತೀಶ್ ದತ್ತು ಪಡೆದುಕೊಂಡಿದ್ದಾರೆ. ಮುಂದಿನ ಯೋಜನೆಗಳನ್ನು ಇನ್ನು ಮುಂದಷ್ಟೇ ಮಾಡಬೇಕಿದೆ. ಸದ್ಯಕ್ಕೆ ಗ್ರಾಮಸ್ಥರ ಜೊತೆ ಚರ್ಚೆಗಳು ಶುರುವಾಗಿವೆ. ಅಯೋಗ್ಯ ಚಿತ್ರದ ಚಿತ್ರೀಕರಣಕ್ಕೆ ಮಂಡ್ಯ ಸುತ್ತಮುತ್ತಲ ಹಳ್ಳಿಗಳನ್ನು ಸುತ್ತಿದ್ದ ಸತೀಶ್, ಸ್ವತಃ ಹಳ್ಳಿಯೊಂದನ್ನು ಪಡೆದಿರುವುದು ಮೆಚ್ಚುವ ವಿಷಯವೇ ಸರಿ.
ಮೂಲತಃ ಮಂಡ್ಯ ಜಿಲ್ಲೆಯವರೇ ಆದ ನೀನಾಸಂ ಸತೀಶ್, ಹಳ್ಳಿಯೊಂದನ್ನು ದತ್ತು ಪಡೆದು ಹೊಸ ಹೆಜ್ಜೆ ಇಟ್ಟಿದ್ದಾರೆ. ಕನ್ನಡದಲ್ಲಿ ಹೀಗೆ ಹಳ್ಳಿಯೊಂದನ್ನು ದತ್ತು ಪಡೆದಿರುವ ಮತ್ತೊಬ್ಬ ನಟ ಪ್ರಕಾಶ್ ರೈ ಮಾತ್ರ. ಈಗ ನೀನಾಸಂ ಸತೀಶ್ ಅದೇ ಹಾದಿ ತುಳಿದಿದ್ದಾರೆ.