ನಾಗರಹಾವು, ಕನ್ನಡಕ್ಕೆ ಇಬ್ಬರು ಸ್ಟಾರ್‍ಗಳನ್ನು ಪರಿಚಯಿಸಿದ ಸಿನಿಮಾ. ವಿಷ್ಣುವರ್ಧನ್ ಮತ್ತು ಅಂಬರೀಷ್ ತೆರೆಗೆ ಪರಿಚಿತರಾಗಿದ್ದು ಇದೇ ಚಿತ್ರದಿಂದ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಸಿನಿಮಾ, ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು. ಈಗ ಈ ಚಿತ್ರ ಕಸ್ತೂರಿ ನಿವಾಸ, ಸತ್ಯಹರಿಶ್ಚಂದ್ರ, ಬಭ್ರುವಾಹನ.. ಇತ್ಯಾದಿಗಳ ಮಾದರಿಯಲ್ಲಿ ಡಿಜಿಟಲ್ ಸ್ಪರ್ಶದೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.
ನಾಗರಹಾವು ಚಿತ್ರ ಇದ್ದಿದ್ದು ಹಳೆ ಟೆಕ್ನಾಲಜಿಯಲ್ಲಿ. ಒಂದೇ ಸ್ಪೀಕರ್‍ನಲ್ಲಿ ವಾಯ್ಸ್ ಕೇಳಬೇಕಿತ್ತು. ಈಗ ಚಿತ್ರಕ್ಕೆ 7.1 ಡಿಟಿಎಸ್ ಸೌಂಡ್ ಎಫೆಕ್ಟ್ ನೀಡಲಾಗಿದೆ. 35 ಎಂಎಂನಲ್ಲಿದ್ದ ಸಿನಿಮಾವನ್ನು ಹೊಸ ತಂತ್ರಜ್ಞಾನಕ್ಕೆ ಒಗ್ಗಿಸಲಾಗಿದೆ. ಹೀಗಾಗಿ ಇಡೀ ಸಿನಿಮಾ ಹೊಸದಾಗಿ ಕಾಣಿಸಿಕೊಳ್ಳಲಿದೆ.
ಅಂದಹಾಗೆ ಇದು ಎನ್.ವೀರಸ್ವಾಮಿ(ರವಿಚಂದ್ರನ್ ಅವರ ತಂದೆ) ಅವರ ನಿರ್ಮಾಣದ ಸಿನಿಮಾ. ಬಾಲಾಜಿ ಉಸ್ತುವಾರಿ ಹೊತ್ತಿರುವ ಈಶ್ವರಿ ಸಂಸ್ಥೆಯಿಂದ ಈ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಹಣದ ಬಗ್ಗೆ ಚಿಂತೆಯಿಲ್ಲ. ಈ ಅದ್ಭುತ ಸಿನಿಮಾವನ್ನು ಈಗಿನ ಯುವಪೀಳಿಗೆ ನೋಡಬೇಕು ಅನ್ನೋದು ನನ್ನ ಕಾಳಜಿ ಎನ್ನುತ್ತಾರೆ ಬಾಲಾಜಿ.