ಪ್ರತಿಷ್ಟಿತ ಫಿಲ್ಮ್‍ಫೇರ್ ಪ್ರಶಸ್ತಿ ಪ್ರಕಟಗೊಂಡಿದೆ. ಈ ಬಾರಿಯ ಶ್ರೇಷ್ಟ ನಟ ಪ್ರಶಸ್ತಿ ಪುನೀತ್ ರಾಜ್‍ಕುಮಾರ್ ಅವರಿಗೆ ನೀಡಲಾಗಿದೆ. ರಾಜಕುಮಾರ ಚಿತ್ರದ ನಟನೆಗೆ ಪುನೀತ್ ಶ್ರೇಷ್ಟರಾಗಿದ್ದರೆ, ಶ್ರೇಷ್ಟ ನಟಿಯಾಗಿರುವುದು ಶೃತಿ ಹರಿಹರನ್. ಇದೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನೂ ಪಡೆದಿರುವ ಶೃತಿ, ಫಿಲ್ಮ್‍ಫೇರ್ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾರೆ.
ಈ ಬಾರಿ ಅತಿ ಹೆಚ್ಚು ಪ್ರಶಸ್ತಿ ಗೆದ್ದಿರುವ ಚಿತ್ರ, ಯೋಗಿ ದ್ವಾರಕೀಶ್ ನಿರ್ಮಾಣದ ಚೌಕ. ಚೌಕ ಚಿತ್ರದ ನಿರ್ದೆಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ತರುಣ್ ಸುಧೀರ್ ಪಾಲಾದರೆ, ಚಿತ್ರದ ಅಪ್ಪಾ ಐ ಲವ್ ಯೂ ಪಾ ಹಾಡಿಗಾಗಿ ಗಾಯಕಿ ಅನುರಾಧಾ ಭಟ್ ಹಾಗೂ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಪ್ರಶಸ್ತಿ ಸ್ವೀಕರಿಸಿದ್ರು. ಒಟ್ಟಿನಲ್ಲಿ ಚೌಕ ಚಿತ್ರ 3 ಫಿಲ್ಮ್‍ಫೇರ್ ಪ್ರಶಸ್ತಿ ಪಡೆಯಿತು.
ಶ್ರೇಷ್ಟ ಪೋಷಕ ನಟ ಪ್ರಶಸ್ತಿ ರವಿಶಂಕರ್ (ಕಾಲೇಜ್ ಕುಮಾರ), ಶ್ರೇಷ್ಟ ಪೋಷಕ ನಟಿ ಪ್ರಶಸ್ತಿ ಭವಾನಿ ಪ್ರಕಾಶ್(ಉರ್ವಿ) ಅವರಿಗೆ ಸಂದಿದ್ದರೆ, ಈ ವರ್ಷದ ಬೆಸ್ಟ್ ಸಿನಿಮಾ ಪ್ರಶಸ್ತಿ, ಒಂದು ಮೊಟ್ಟೆಯ ಕಥೆ ಚಿತ್ರಕ್ಕೆ ಸಂದಿದೆ.
ಅತ್ಯುತ್ತಮ ಸಂಗೀತ ನಿರ್ದೇಶಕ ಭರತ್ (ಬ್ಯೂಟಿಫುಲ್ ಮನಸುಗಳು), ಅತ್ಯುತ್ತಮ ಗಾಯಕ ಅರ್ಮಾನ್ ಮಲಿಕ್ ಅತ್ಯುತ್ತಮ ಗಾಯಕ (ಒಂದು ಮಳೆಬಿಲ್ಲು.. ಚಿತ್ರ: ಚಕ್ರವರ್ತಿ) ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಇನ್ನು ವಿಮರ್ಶಕರ ಪ್ರಶಸ್ತಿ ಪಟ್ಟಿಯಲ್ಲಿ ಶ್ರೇಷ್ಟನಟಿಯಾಗಿ ಶ್ರದ್ಧಾ ಶ್ರೀನಾಥ್ (ಚಿತ್ರ:ಆಪರೇಷನ್ ಅಲಮೇಲಮ್ಮ) ಹಾಗೂ ಶ್ರೇಷ್ಟನಟನಾಗಿ ಧನಂಜಯ್ (ಚಿತ್ರ: ಅಲ್ಲಮ) ಹೊರಹೊಮ್ಮಿದ್ದಾರೆ.