ದ್ವಾರಕೀಶ್ ಬ್ಯಾನರ್‍ನ ಮತ್ತೊಂದು ಚಿತ್ರ ಅಮ್ಮ ಐ ಲವ್ ಯು. ಇದು ತಾಯಿಯ ಕುರಿತಾದ ಚಿತ್ರ. ತಾಯಿಗಾಗಿ ಸಕಲವನ್ನೂ ತ್ಯಾಗ ಮಾಡುವ ಮಗ, ಭಿಕ್ಷೆಯನ್ನೂ ಬೇಡುತ್ತಾನೆ. ಅದೇ ಚಿತ್ರದ ಹೈಲೈಟ್. ಆದರೆ, ಅದಕ್ಕಿಂತ ಇಂಟ್ರೆಸ್ಟಿಂಗ್ ಎಂದರೆ, ತಾಯಿಯ ಬಗ್ಗೆ ದ್ವಾರಕೀಶ್ ಬ್ಯಾನರ್‍ಗೆ ಇರುವ ವಿಶೇಷ ಪ್ರೀತಿ.
ದ್ವಾರಕೀಶ್ ಚಿತ್ರ ಬ್ಯಾನರ್‍ನ ಮೊದಲ ಸಿನಿಮಾ, ಮಮತೆಯ ಬಂಧನ. ಹೆಸರೇ ಹೇಳುವಂತೆ ಅದು ಮಾತೃ ವಾತ್ಸಲ್ಯದ ಕಥೆ. ಡಾ.ರಾಜ್‍ಗಾಗಿ ನಿರ್ಮಿಸಿದ್ದ ಸಿನಿಮಾ, ಡಾ.ರಾಜ್ ಮತ್ತು ಬಿ.ಸರೋಜಾದೇವಿ ಅಭಿನಯದ ಭಾಗ್ಯವಂತರು. ಕನ್ನಡದ ಕ್ಲಾಸಿಕ್ ಸಿನಿಮಾಗಳಲ್ಲೊಂದು. ನೀ ಬರೆದ ಕಾದಂಬರಿ, ಡ್ಯಾನ್ಸ್ ರಾಜಾ ಡ್ಯಾನ್ಸ್, ಗಂಡ ಮನೆ ಮಕ್ಕಳು.
ದ್ವಾರಕೀಶ್ ಚಿತ್ರಗಳಲ್ಲಿ ಅಮ್ಮನ ಕುರಿತ ಹಾಡುಗಳೂ ವಂಡರ್‍ಫುಲ್. ಅಮ್ಮಾ ಎಂದರೆ ಏನೋ ಹರುಷವೂ.. ಗೀತೆ ಅಮ್ಮನ ದಿನದಂದು ಕೇಳಿಸುತ್ತಲೇ ಇರುತ್ತೆ. ಡಾನ್ಸ್ ರಾಜಾ ಡಾನ್ಸ್ ಚಿತ್ರದ ಅಮ್ಮಾ.. ಅಮ್ಮಾ.. ನಿನ್ನಾ ಸ್ನೇಹಕೆ.. ಹಾಡು, ಭಾಗ್ಯವಂತರು ಚಿತ್ರದ ಭಾಗ್ಯವಂತರು ನಾವೆ ಭಾಗ್ಯವಂತರು, ನೀ ಮೀಟಿದಾ ನೆನಪೆಲ್ಲವು.. ನೀ ಬರೆದ ಕಾದಂಬರಿಯಿಂದ.. ಹೀಗೆ ತಾಯಿಯ ಹಾಡುಗಳಿಗೆ ದ್ವಾರಕೀಶ್ ಚಿತ್ರಗಳಲ್ಲಿ ಬೇರೆಯದ್ದೇ ಸ್ಥಾನಮಾನ. ಈಗ ಅಮ್ಮ ಐ ಲವ್ ಯೂ ಚಿತ್ರದಲ್ಲೂ ಅಂಥದ್ದೇ ಹಾಡಿದೆ. ಅಮ್ಮಾ.. ನನ್ನ ಈ ಜನುಮ ಎಂಬ ಹಾಡು, ಮಕ್ಕಳ ಕಣ್ಣಲ್ಲಿ ನೀರು ತಂದರೆ ಅಚ್ಚರಿಯಿಲ್ಲ.
ಈ ಸಿನಿಮಾ ನನ್ನ ಅಜ್ಜಿಗೆ ಅರ್ಪಣೆ ಎಂದಿದ್ದಾರೆ ನಿರ್ದೇಶಕ ಚೈತನ್ಯ. ಚೈತನ್ಯ ಅವರ ಅಜ್ಜಿ, ಯಾವಾಗಲೂ ಸಿನಿಮಾ ಮಾಡು ಎಂದು ಹೇಳುತ್ತಿದ್ದರಂತೆ. ಹಾಗೆಯೇ ಆ ದಿನಗಳು ಚಿತ್ರ ಮಾಡಿದಾಗ, ಪ್ರತಿಯೊಬ್ಬರೂ ನಿನ್ನ ಸಿನಿಮಾ ನೋಡಿ ಕಣ್ಣೀರಿಡಬೇಕು, ಭಾವುಕರಾಗಬೇಕು ಅಂತಾ ಸಿನಿಮಾ ಮಾಡು ಎನ್ನುತ್ತಿದ್ದರಂತೆ. ಈಗ ಅಮ್ಮ ಐ ಲವ್ ಯು ಅಂತಹ ಸಿನಿಮಾ. ಆದರೆ, ಕಳೆದ ವರ್ಷವಷ್ಟೇ ಅಜ್ಜಿಯನ್ನು ಕಳೆದುಕೊಂಡಿದ್ದಾರೆ ಚೈತನ್ಯ.
ಇಂತಹ ಕಥೆಯುಳ್ಳ ಸಿನಿಮಾ ಮಾಡೋಕೆ ಅವರೇ ಪ್ರೇರಣೆ. ಹೀಗಾಗಿ ಈ ಚಿತ್ರ ಅವರಿಗೇ ಅರ್ಪಣೆ ಎಂದಿದ್ದಾರೆ ಚೈತನ್ಯ. ಯೋಗಿ ದ್ವಾರಕೀಶ್, ಚೈತನ್ಯ ಮತ್ತು ಚಿರಂಜೀವಿ ಸರ್ಜಾ, ಆಟಗಾರ ಚಿತ್ರದ ನಂತರ ಮತ್ತೊಮ್ಮೆ ಒಂದಾಗಿದ್ದಾರೆ. ಸಿತಾರಾ, ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ಇದೇ ವಾರ ರಿಲೀಸ್.