ಅಮ್ಮ ಐ ಲವ್ ಯೂ ಇದೇ ವಾರ ರಿಲೀಸ್ ಆಗುತ್ತಿದೆ. ಹೆಸರು ಹೇಳುವಂತೆ ಇದು ತಾಯಿ, ಮಗನ ಬಾಂಧವ್ಯದ ಚಿತ್ರ. ಈ ಹಿಂದೆ ತಾಯಿ ಪ್ರೀತಿ ಸಾರುವ ನೂರಾರು ಸಿನಿಮಾಗಳು ಬಂದಿರಬಹುದು. ಆದರೆ, ಈ ಚಿತ್ರ ಮಾತ್ರ ಈ ಹಿಂದಿನ ಯಾವ ತಾಯಿ ಸೆಂಟಿಮೆಂಟ್ ಚಿತ್ರಗಳಿಗೂ ಹೋಲಿಕೆ ಆಗೋದಿಲ್ಲ. ಆ ಕಾರಣಕ್ಕಾಗಿಯೇ ರೀಮೇಕ್ ಆದರೂ, ಈ ಚಿತ್ರವನ್ನು ತೋರಿಸಲೇಬೇಕೆಂದು ಹೊರಟಿದೆ ದ್ವಾರಕೀಶ್ ಪ್ರೊಡಕ್ಷನ್ಸ್. ಏಕೆಂದರೆ, ಇದು ತಮಿಳಿನ ಪಿಚ್ಚೈಕಾರನ್ ಚಿತ್ರದ ರೀಮೇಕ್.
ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿರುವ ತಾಯಿ, ಚಿಕಿತ್ಸೆಗೆ ಸ್ಪಂದಿಸದೇ ಹೋದಾಗ, ಸ್ವಾಮೀಜಿಯೊಬ್ಬರ ಬಳಿ ಪರಿಹಾರ ಹುಡುಕಿಕೊಂಡು ಹೋಗುತ್ತಾನೆ ಮಗ. ಆಗ ಆ ಸ್ವಾಮೀಜಿ, 48 ದಿನಗಳ ಕಾಲ, ಭಿಕ್ಷುಕನಾಗಿ ಬದುಕಿದರೆ ತಾಯಿ ಬದುಕುತ್ತಾಳೆ ಎನ್ನುತ್ತಾರೆ. ಆದರೆ, ಅದು ಯಾರಿಗೂ ಗೊತ್ತಾಗುವಂತಿಲ್ಲ ಎಂದು ಷರತ್ತು ವಿಧಿಸುತ್ತಾರೆ. ಕೋಟ್ಯಧಿಪತಿಯಾಗಿದ್ದರೂ, ತಾಯಿಗಾಗಿ ಎಲ್ಲವನ್ನೂ ಬಿಟ್ಟು ಭಿಕ್ಷುಕನಾಗುತ್ತಾನೆ ನಾಯಕ. ಆಮೇಲೆ ಏನಾಗುತ್ತೆ..?
ತಾಯಿಯನ್ನು ಪ್ರೀತಿಯಿಂದ ನೋಡಕೊಳ್ಳುತ್ತಿರುವ ಮಕ್ಕಳು, ತಾಯಿಯನ್ನು ಕಸಕ್ಕಿಂತಲೂ ಕಡೆಯದಾಗಿ ನೋಡಿಕೊಳ್ಳುತ್ತಿರುವ ದ್ರೋಹಿಗಳು, ತಾಯಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಮಕ್ಕಳು, ತಾಯಿಯನ್ನೇ ಕಾಣದ ಅನಾಥರು.. ಹೀಗೆ ಪ್ರತಿಯೊಬ್ಬರ ಕಣ್ಣನ್ನೂ ಒದ್ದೆ ಮಾಡುವಂತ ಅದ್ಬುತ ಕತೆ, ಸಂದೇಶ ಸಿನಿಮಾದಲ್ಲಿದೆ.
ಆ ದಿನಗಳು ಚೇತನ್ ನಿರ್ದೇಶನದ ಸಿನಿಮಾದಲ್ಲಿ ಕೋಟ್ಯಧಿಪತಿ, ಭಿಕ್ಷುಕನಾಗಿ ನಟಿಸಿರುವುದು ಚಿರಂಜೀವಿ ಸರ್ಜಾ. ಸಿತಾರಾ ತಾಯಿಗಾಗಿ ನಟಿಸಿದ್ದರೆ, ನಿಶ್ವಿಕಾ ನಾಯ್ಡು ನಾಯಕಿ. ಯೋಗಿ ದ್ವಾರಕೀಶ್ ನಿರ್ಮಾಣದ ಚಿತ್ರಕ್ಕೆ ಸಂಗೀತ ನೀಡಿರುವುದು ಗುರುಕಿರಣ್.