ಕ್ರೇಜಿ ಸ್ಟಾರ್ ರವಿಚಂದ್ರನ್ ಅವರದ್ದು ವಿಶಿಷ್ಟವಾದ ಧ್ವನಿ. ಇಂದಿಗೂ ರವಿಚಂದ್ರನ್ ಅವರನ್ನು ಮಿಮಿಕ್ರಿ ಮಾಡುವವರು, ಪ್ರೇಮಲೋಕ, ರಣಧೀರ, ಅಂಜದಗಂಡು ಮೊದಲಾದ ಚಿತ್ರಗಳಲ್ಲಿನ ಧ್ವನಿಯನ್ನೇ ಅನುಸರಿಸ್ತಾರೆ. ಆದರೆ, ಸ್ವಾರಸ್ಯವೇನೂ ಗೊತ್ತೇ.. ಅದು ರವಿಚಂದ್ರನ್ ಧ್ವನಿಯಲ್ಲ. ಆರಂಭದ ದಿನಗಳಲ್ಲಿ ರವಿಚಂದ್ರನ್ ತಮ್ಮ ಪಾತ್ರಗಳಿಗೆ ಶ್ರೀನಿವಾಸಪ್ರಭು ಅವರಿಂದ ಡಬ್ ಮಾಡಿಸ್ತಾ ಇದ್ರು. ಈಗ ಮತ್ತೊಮ್ಮೆ ರವಿಚಂದ್ರನ್‍ಗೆ ಕಂಠವಾಗಲು ಬಂದಿದ್ದಾರೆ ಶ್ರೀನಿವಾಸಪ್ರಭು.
ಕುರುಕ್ಷೇತ್ರ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರ ಮಾಡಿರುವ ರವಿಚಂದ್ರನ್‍ಗೆ ಶ್ರೀನಿವಾಸಪ್ರಭು ಅವರೇ ಧ್ವನಿ ಕೊಡಲಿದ್ದಾರೆ. ಕನ್ನಡದ ಮೇಲೆ ಅದ್ಭುತ ಹಿಡಿತ ಹೊಂದಿರುವ, ರಂಗಭೂಮಿಯ ನಂಟೂ ಇರುವ ಶ್ರೀನಿವಾಸ್‍ಪ್ರಭು ಅವರಿಗೆ ಪೌರಾಣಿಕ ಚಿತ್ರದ ಡೈಲಾಗ್ ಹೇಳುವುದು ನೀರು ಕುಡಿದಷ್ಟೇ ಸುಲಭ.
ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕುರುಕ್ಷೇತ್ರ ಕೆಲವೇ ದಿನಗಳಲ್ಲಿ ಡಬ್ಬಿಂಗ್ ಮುಗಿಸಿ, ಆಡಿಯೋ ಲಾಂಚ್ ಮಾಡೋಕೆ ಸಿದ್ಧವಾಗುತ್ತಿದೆ. ದರ್ಶನ್ ಅಭಿನಯದ 50ನೇ ಸಿನಿಮಾ ಅಷ್ಟೇ ಅಲ್ಲ, ಹೆಚ್ಚೂ ಕಡಿಮೆ ಅರ್ಧಕ್ಕರ್ಧ ಕನ್ನಡ ಚಿತ್ರರಂಗವೇ ಪಾಲ್ಗೊಂಡಿರುವ ಸಿನಿಮಾ ಕುರುಕ್ಷೇತ್ರ.