ಇದ್ಯಾವುದು.. ಇದೇನು ಹೊಸ ಸಿನಿಮಾನಾ.. ಅಂತಾ ಕನ್‍ಫ್ಯೂಸ್ ಆಗಬೇಡಿ. ಅವನೇ ಶ್ರೀಮನ್ನಾರಾಯಣ ಚಿತ್ರತಂಡ ಈಗ ರಕ್ಷಿತ್ ಶೆಟ್ಟಿ ಮಯವಾಗಿದೆ. ಅದಕ್ಕೆ ಕಾರಣ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ. ತಮ್ಮ ಚಿತ್ರದ ನಾಯಕನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿರುವ ಚಿತ್ರತಂಡ, ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.
ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್. ಆದರೆ, ಎಲ್ಲರಂತಲ್ಲ. ಸದಾ ನಗುತ್ತಾ, ನಗಿಸುತ್ತಾ ಇರುವ ಪಾತ್ರ. ಹೇಳಿದ ಕೆಲಸವೊಂದನ್ನು ಬಿಟ್ಟು, ಮಿಕ್ಕಿದ್ದನ್ನೆಲ್ಲ ಮಾಡುವ ಪೊಲೀಸ್. ಆದರೆ, ಅವನು ಒಂದು ಮಹಾನ್ ಕಾರ್ಯಕ್ಕಾಗಿ ಬದುಕುತ್ತಿರುತ್ತಾನೆ. ಅದೇನು ಅನ್ನೋದು ಚಿತ್ರದ ಸಸ್ಪೆನ್ಸ್.
ಸಚಿನ್ ನಿರ್ದೇಶನದ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು. ಈಗಾಗಲೇ ಚಿತ್ರದ 33 ದಿನಗಳ ಶೂಟಿಂಗ್ ಆಗಿದೆ. ಇನ್ನೂ 70 ದಿನಗಳ ಶೂಟಿಂಗ್ ಬಾಕಿ ಇದೆ. ಮುಂದಿನ ಚಿತ್ರೀಕರಣವೆಲ್ಲ ಸ್ಟುಡಿಯೋ ಸೆಟ್‍ನಲ್ಲಿ ನಡೆಯಲಿದೆ. ಚಿತ್ರವನ್ನು ಡಿಸೆಂಬರ್‍ಗೆ ತೆರೆಗೆ ತರುವುದು ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ಲಾನ್.
ಈ ಹುಟ್ಟುಹಬ್ಬಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರದ ಫಸ್ಟ್‍ಲುಕ್ ರಿಲೀಸ್ ಆದರೆ, ಇದೇ ದಿನ 777 ಚಾರ್ಲಿ ಚಿತ್ರದ ಮುಹೂರ್ತವೂ ನಡೆಯಲಿದೆ. ಇನ್ನು ಕೆಲವು ದಿನ ರಕ್ಷಿತ್ ಶೆಟ್ಟಿಗೆ ಅವನೇ ಶ್ರೀಮನ್ನಾರಾಯಣ ಚಿತ್ರದಿಂದ ವಿರಾಮ. ಆ ವಿರಾಮದಲ್ಲಿ ಚಾರ್ಲಿಯ ಶೂಟಿಂಗ್. ಹಾಗಂತ ಇಡೀ ನಾರಾಯಣ ಚಿತ್ರತಂಡ ಸುಮ್ಮನೆ ಇರಲ್ಲ. ಅದು ಬಿಡುವೇ ಇಲ್ಲದಂತೆ ಚಿತ್ರದ ಸೆಟ್ ಹಾಕುವ ಕೆಲಸದಲ್ಲಿ ಬ್ಯುಸಿಯಾಗಿದೆ.
ಒಟ್ಟಿನಲ್ಲಿ ಈ ಬರ್ತ್ ಡೇಯನ್ನು ರಕ್ಷಿತ್ ಶೆಟ್ಟಿ ಬಿಡುವೇ ಇಲ್ಲದಷ್ಟು ಕೆಲಸ ಹೇರಿಕೊಂಡು ಸೆಲಬ್ರೇಟ್ ಮಾಡುತ್ತಿದ್ದಾರೆ.