ಅಮ್ಮಾ.. ನೀನು ನಮಗಾಗಿ.. ಸಾವಿರ ವರುಷ ಸುಖವಾಗಿ.. ಬಾಳಲೆ ಬೇಕು.. ಈ ಮನೆ ಬೆಳಕಾಗಿ.. ಇದು ಕೆರಳಿದ ಸಿಂಹ ಚಿತ್ರದ ಹಾಡು. ಹಾಡಿನಲ್ಲಿ ತಾಯಿಯಾಗಿದ್ದವರು ಪಂಡರೀಬಾಯಿ. ಮಕ್ಕಳಾಗಿದ್ದವರು ಡಾ.ರಾಜ್ಕುಮಾರ್ ಮತ್ತು ಶ್ರೀನಿವಾಸ ಮೂರ್ತಿ. ಈಗ ಆ ಹಾಡನ್ನು ರಾಜ್ಕುಮಾರ್ ಮಕ್ಕಳು ತಾಯಿಗಾಗಿ ಹಾಡಿದ್ಧಾರೆ.
ಪಾರ್ವತಮ್ಮ ರಾಜ್ಕುಮಾರ್ ಅವರ ಮೊದಲ ವರ್ಷದ ಪುಣ್ಯತಿಥಿಯಂದು ಈ ಹಾಡನ್ನು ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಹಾಡುವ ಮೂಲಕ ತಾಯಿಯನ್ನು ಸ್ಮರಿಸಿದ್ದಾರೆ. ಹಾಡಿನ ಜೊತೆಗೆ ಹಳೆಯ ಫೋಟೋಗಳನ್ನೂ ಕೊಲಾಜ್ ಮಾಡಿರುವ ವಿಡಿಯೋವನ್ನು ತಮ್ಮ ತಾಯಿಯ ಪುಣ್ಯತಿಥಿಯ ದಿನ ಬಿಡುಗಡೆ ಮಾಡಿದ್ದಾರೆ.
ಇಡೀ ಕುಟುಂಬ ಜೊತೆಗಿದ್ದರೂ, ಅಮ್ಮ ಇಲ್ಲ ಎನ್ನುವ ಕೊರಗು ಯಾವತ್ತಿಗೂ ಇರುತ್ತೆ. ಅಮ್ಮನ ವ್ಯಕ್ತಿತ್ವಕ್ಕೆ ಸಾಟಿಯಿಲ್ಲ. ಅವರು ನಮ್ಮ ಕುಟುಂಬಕ್ಕೆ ಹಾಗೂ ಇಡೀ ಚಿತ್ರರಂಗಕ್ಕೆ ಬೆನ್ನೆಲುಬಾಗಿದ್ದವರು. ನಮ್ಮ ನೆನಪುಗಳಲ್ಲಿ ಅವರು ಸದಾ ಇರುತ್ತಾರೆ ಎಂದು ತಾಯಿಯ ಗುಣಗಾನ ಮಾಡಿದ್ದಾರೆ ಶಿವರಾಜ್ಕುಮಾರ್.
ಇದೇ ವೇಳೆ ಸಿರಿಗೆರೆ ಯರಿಸ್ವಾಮಿ ಬರೆದ ದೊಡ್ಮನೆ ಅಮ್ಮ ಕೃತಿಯೂ ಬಿಡುಗಡೆಯಾಯ್ತು. ಪಾರ್ವತಮ್ಮನವರ ಪುಣ್ಯತಿಥಿ ವಿಶೇಷವಾಗಿ ಹಲವೆಡೆ ಅನ್ನಸಂತರ್ಪಣೆ, ರಕ್ತದಾನ ಶಿಬಿರಗಳೂ ನಡೆದವು.