ಅಂಬರೀಷ್ ಅದ್ಭುತ ಕಲಾವಿದ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಅಂಬರೀಷ್ ಯಾವುದನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳೋದಿಲ್ಲ ಅನ್ನೋದು ಅವರ ಮೇಲಿರೋ ಆರೋಪ. ನಿಜಾನಾ ಅಂತಾ ಕೇಳಿದ್ರೆ, ಅದು ಆರೋಪ ಅಲ್ಲ ಕಣ್ರೋ... ಅದು ಸತ್ಯ. ನಾನ್ ಇರೋದೇ ಹಿಂಗೆ ಅಂತಾರೆ ಅಂಬರೀಷ್. ಈಗ ಅವರ ಮಗ ಅಭಿಷೇಕ್ ಸಿನಿಮಾ ಪ್ರವೇಶ ಮಾಡುತ್ತಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ತಮ್ಮ ತಂದೆ ಹಾಗೂ ತಾಯಿಯ ಇಷ್ಟದ ಚಿತ್ರಗಳ ಬಗ್ಗೆ ಹೇಳಿಕೊಂಡಿದ್ದಾರೆ.
ಅಂಬರೀಷ್ ಅಭಿನಯದ ಅಂತ, ಚಕ್ರವ್ಯೂಹ, ಅಣ್ಣಾವ್ರು ಸಿನಿಮಾ ಇಷ್ಟವಂತೆ. ತಾಯಿಯ ಚಿತ್ರಗಳಲ್ಲಿ ಅವರಿಗೆ ಇಷ್ಟವಾಗಿರೋದು ಎಕ್ಸ್‍ಕ್ಯೂಸ್ ಮಿ ಚಿತ್ರ. ಆ ಚಿತ್ರದ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ.. ಹಾಡು ಇಂದಿಗೂ ಅಭಿಷೇಕ್‍ಗೆ ಫೇವರಿಟ್. ಅಪ್ಪ-ಅಮ್ಮ ಒಟ್ಟಿಗೇ ನಟಿಸಿರುವ ಆಹುತಿ ಸಿನಿಮಾ, ಅವರಿಬ್ಬರೂ ಜೊತೆಯಲ್ಲಿದ್ಧಾರೆ ಅನ್ನೋ ಕಾರಣಕ್ಕೇ ಇಷ್ಟ. ನ್ಯೂಡೆಲ್ಲಿ ಚಿತ್ರದ ಅಭಿನಯ ಅಚ್ಚುಮೆಚ್ಚು.
ಹೀಗೆಲ್ಲ ಹೇಳೋ ಅಭಿಷೇಕ್‍ಗೆ ಅಂಬರೀಷ್ ಅಭಿನಯದ ಬೆಸ್ಟ್ ಸಿನಿಮಾ ಯಾವುದು ಅಂದ್ರೆ, ಇನ್ನೂ ಬಂದಿಲ್ಲ ಅಂತಾರೆ. ಅಭಿಷೇಕ್ ತಮ್ಮ ತಂದೆಯ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರವನ್ನು ಕಾಯುತ್ತಿದ್ಧಾರೆ. ಆ ಚಿತ್ರ ಅಂಬರೀಷ್ ಅಭಿನಯದ ಬೆಸ್ಟ್ ಸಿನಿಮಾ ಆಗಲಿದೆ ಅನ್ನೋದು ಅಭಿಷೇಕ್ ನಿರೀಕ್ಷೆ.
ಅಪ್ಪನ ಬೆಸ್ಟ್ ಸಿನಿಮಾ ನಿರೀಕ್ಷೆಯಲ್ಲಿರುವ ಅಭಿಷೇಕ್, ತಮ್ಮ ಮೊದಲ ಸಿನಿಮಾ ಅಮರ್ ಬಗ್ಗೆ ಥ್ರಿಲ್ಲಾಗಿರುವುದಂತೂ ನಿಜ. ಮೇ 28ಕ್ಕೆ ಚಿತ್ರದ ಮುಹೂರ್ತ.