ಯಾರಿದು ಚೆಗವೇರಾ..? ಕ್ಯೂಬಾ ಅನ್ನೋ ಪುಟ್ಟ ದೇಶದ ಕಥೆ ಗೊತ್ತಿಲ್ಲದವರು ಕೇಳುವ ಪ್ರಶ್ನೆ ಇದು. ಅಮೆರಿಕದಂತ ಅಮೆರಿಕವನ್ನೇ ನಡುಗಿಸಿದ ಕ್ರಾಂತಿಕಾರಿ ಚೆಗವೇರಾ. ಆತನನ್ನು ನ್ಯಾಯದ ಮಾರ್ಗದಲ್ಲಿ ಕೊಲ್ಲೋಕೆ ಅಮೆರಿಕಾಗೆ ಸಾಧ್ಯವಾಗಲೇ ಇಲ್ಲ. ಆ ಕಥೆ ಬಿಡಿ, ಈಗ ಆತನನ್ನೇ ಹೋಲುವ ಪಾತ್ರವನ್ನಿಟ್ಟುಕೊಂಡು ಕನ್ನದಲ್ಲೊಂದು ಸಿನಿಮ ಮಾಡುತ್ತಿದ್ದಾರೆ ನಿರ್ಮಾಪಕ ಕನಕಪುರ ಶ್ರೀನಿವಾಸ್. ಚಿತ್ರದ ಹೆಸರು ರಣಂ.
ಆ ದಿನಗಳು, ಮೈನಾ ಖ್ಯಾತಿಯ ಚೇತನ್ ಇತ್ತೀಚೆಗೆ ಬಿಜೆಪಿ ವಿರೋಧಿ ಚಳವಳಿಗಳಲ್ಲೇ ಗುರುತಿಸಿಕೊಂಡಿದ್ದ ನಟ. ದಿಡ್ಡಳ್ಳಿ ನಿರ್ವಸಿತರು, ಎಂಡೋಸಲ್ಫಾನ್ ಹೋರಾಟಗಳಲ್ಲಿದ್ದ ಚೇತನ್, ಬಹುದಿನಗಳ ನಂತರ ರಣಂ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಈ ಸಿನಿಮಾದಲ್ಲಿ ದರ್ಶನ್ ಹಾಗೂ ಉಪೇಂದ್ರ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚೇತನ್‍ಗೆ ಈ ಸಿನಿಮಾದಲ್ಲಿ ನಾಲ್ವರು ನಾಯಕಿಯರು. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ತಯಾರಾಗುತ್ತಿರುವ ಚಿತ್ರಕ್ಕೆ ಸಮುದ್ರ ನಿರ್ದೇಶಕರು.
ಚೇತನ್‍ಗೆ ಖುಷಿಯಾಗೋಕೆ ಕಾರಣ, ಚೇತನ್ ಕೂಡಾ ಚೆಗವೇರಾ ಅಭಿಮಾನಿ. ಚೇತನ್ ಹೋರಾಟದ ಬದುಕಿಗೆ ಚೆಗವೇರಾ ಸ್ಫೂರ್ತಿಯಂತೆ. ಹೀಗಾಗಿಯೇ ಈ ಚಿತ್ರ ನನಗೆ ಖುಷಿ ಕೊಡುತ್ತಿದೆ ಎಂದು ಹೇಳಿಕೊಂಡಿದ್ದಾರೆ ಚೇತನ್.
ಇದು ಈಗಿನ ಕಾಲಕ್ಕೆ, ಪರಿಸ್ಥಿತಿಗೆ ಹೇಳಿ ಮಾಡಿಸಿದ ಕಥೆ. ಇಷ್ಟವಾಯಿತು. ಕನ್ನಡ ಚಿತ್ರಕ್ಕೆ ಮಾತ್ರ ನಾನು ನಿರ್ಮಾಪಕ. ತೆಲುಗಿಗೆ ಬೇರೆ ನಿರ್ಮಾಪಕರಿದ್ದಾರೆ. ಎರಡೂ ಭಾಷೆಗೆ ಸಮುದ್ರ ಅವರೇ ನಿರ್ದೇಶಕ. ಚೇತನ್ ಕೂಡಾ ಕನ್ನಡದಲ್ಲಿ ಮಾತ್ರ ಹೀರೋ ಎಂದು ಮಾಹಿತಿ ಕೊಟ್ಟಿದ್ದಾರೆ ಕನಕಪುರ ಶ್ರೀನಿವಾಸ್.