ಪುನೀತ್ ರಾಜ್‍ಕುಮಾರ್, ಅಮೋಲಿ ಎಂಬ ಸಾಕ್ಷ್ಯಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಆ ಸಾಕ್ಷ್ಯಚಿತ್ರಕ್ಕೆ ಧ್ವನಿ ನೀಡುವುದಕ್ಕೆ ಕಾರಣ, ಆ ಡಾಕ್ಯುಮೆಂಟರಿಯಲ್ಲಿದ್ದ ಕಥೆ ಮತ್ತು ಸಂದೇಶ. ಈ ಡಾಕ್ಯುಮೆಂಟರಿಯಲ್ಲಿರೋದು ಹೆಣ್ಣು ಮಕ್ಕಳ ಕಳ್ಳಸಾಗಾಣಿಕೆ ವಿರುದ್ಧದ ಜಾಗೃತಿಯ ಕಥೆ. ಹೀಗಾಗಿಯೇ ಈ ಡಾಕ್ಯುಮೆಂಟರಿಗೆ ಧ್ವನಿ ನೀಡಿದ್ದಾರೆ ಪುನೀತ್. ಅಷ್ಟೇ ಅಲ್ಲ, ತಮ್ಮದೇ ಪಿಆರ್‍ಕೆ ಆಡಿಯೋದಿಂದ ಡಾಕ್ಯುಮೆಂಟರಿಯನ್ನು ರಿಲೀಸ್ ಕೂಡಾ ಮಾಡಿದ್ದಾರೆ.
ಜಾಸ್ಮಿನ್ ಕೌರ್ ಮತ್ತು ಅವಿನಾಶ್ ರಾಯ್ ಎಂಬುವರು ನಿರ್ದೇಶಿಸಿರುವ ಡಾಕ್ಯುಮೆಂಟರಿಯನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಬೇಕು ಎನ್ನುವುದೇ ನನ್ನ ಉದ್ದೇಶ. ನನ್ನ ಧ್ವನಿಯಿಂದಾಗಿ ಹೆಚ್ಚು ಜನಕ್ಕೆ ರೀಚ್ ಆದರೆ, ಜಾಗೃತಿ ಮೂಡಿದರೆ ಅದು ಕೊಡುವ ಸಂತೃಪ್ತಿಯೇ ಬೇರೆ ಎಂದಿದ್ದಾರೆ ಪುನೀತ್.
ಅಂದಹಾಗೆ ಇದೇ ಡಾಕ್ಯುಮೆಂಟರಿ ಬೇರೆ ಭಾಷೆಯಲ್ಲೂ ಬಂದಿದೆ. ತಮಿಳಿನಲ್ಲಿ ಕಮಲ್‍ಹಾಸನ್, ತೆಲುಗಿನಲ್ಲಿ ನಾನಿ, ಹಿಂದಿಯಲ್ಲಿ ರಾಜ್‍ಕುಮಾರ್ ರಾವ್, ಮರಾಠಿಯಲ್ಲಿ ಸಚಿನ್ ಖೇಡ್ಕರ್ ಡಾಕ್ಯುಮೆಂಟರಿಯನ್ನು ನಿರೂಪಣೆ ಮಾಡಿದ್ದಾರೆ.
ಪುನೀತ್ ಅವರ ಜಾಕಿ ಚಿತ್ರದಲ್ಲೂ ಕೂಡಾ ಇದೇ ಕಥೆಯಿತ್ತು. ಸಾಮಾಜಿಕ ಜಾಗೃತಿ ಮೂಡಿಸುವ ವಿಚಾರ ಬಂದಾಗ ಇಲ್ಲ ಎನ್ನಲು ಸಾಧ್ಯವಾಗಲಿಲ್ಲ. ನಮ್ಮ ಸಂಸ್ಥೆಯಿಂದಲೂ ಇಂತಹ ಜಾಗೃತಿ ಮೂಡಿಸುವ ಡಾಕ್ಯುಮೆಂಟರಿ ಮಾಡುವ ಆಲೋಚನೆಯಿದೆ ಎಂದು ಹೇಳಿಕೊಂಡಿದ್ದಾರೆ ಪುನೀತ್.