ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದ ಮೊದಲ ಹಂತದ ಚಿತ್ರೀಕರಣವೇ ಮುಗಿದಿದೆ. ಸುದೀಪ್ ಅಭಿನಯಿಸುವ ದೃಶ್ಯಗಳು ಹಾಗೂ ಸುದೀಪ್ ಇಲ್ಲದ ದೃಶ್ಯಗಳ ಚಿತ್ರೀಕರಣ ಮುಕ್ತಾಯವಾಗಿದೆ. ಅವುಗಳ ಎಡಿಟಿಂಗ್ ಕೆಲಸವನ್ನೂ ಚಿತ್ರತಂಡ ಈಗಾಗಲೇ ಮುಗಿಸಿದೆ. ವಿಶೇಷವೆಂದರೆ ಚಿತ್ರಕ್ಕೆ ಇನ್ನೂ ನಾಯಕಿ ಯಾರು ಅನ್ನೋದೇ ಫೈನಲ್ ಆಗಿಲ್ಲ. ಪ್ರಮುಖ ಪಾತ್ರವೊಂದಕ್ಕೆ ಇನ್ನೂ ಹುಡುಕಾಟ ನಡೆಯುತ್ತಿದೆ.
ಇಷ್ಟು ವೇಗವಾಗಿ ಚಿತ್ರೀಕರಣ ನಡೆಯುತ್ತಿರುವುದರ ಕ್ರೆಡಿಟ್‍ನ್ನು ಸುದೀಪ್ ನೀಡಿರುವುದು ನಿರ್ದೇಶಕ ಕಾರ್ತಿಕ್‍ಗೆ. ಕಾರ್ತಿಕ್‍ಗೆ ಇದು ಮೊದಲ ಚಿತ್ರ. ಕೇವಲ ಆತನಲ್ಲಿದ್ದ ಉತ್ಸಾಹ ನೋಡಿ ಮೆಗಾಪ್ರಾಜೆಕ್ಟ್‍ನ್ನು ಅವರ ಕೈಗೆ ನೀಡಿದ್ದು ಸುದೀಪ್ ಮತ್ತು ನಿರ್ಮಾಪಕ ಸೂರಪ್ಪ ಬಾಬು.
ಸೂರಪ್ಪ ಬಾಬು ಕತೆ ಹೇಳೋದಕ್ಕೆ ಒಬ್ಬ ಹುಡುಗನನ್ನು ಕರೆದುಕೊಂಡು ಬಂದ್ರು. ಆತ ಹೇಳಿದ ಕತೆ ನನಗೆ ಇಷ್ಟವಾಗಲಿಲ್ಲ. ಆದರೆ, ಆತನ ಉತ್ಸಾಹ ನನಗೆ ಮೆಚ್ಚುಗೆಯಾಯ್ತು. ಕತೆ ಹೇಳೋದ್ರ ಬಗ್ಗೆ ಫ್ಯಾಷನೇಟ್ ಆಗಿದ್ದ ಕಾರ್ತಿಕ್‍ಗೆ ನಾನೇ ಒಂದು ಕತೆ ಹೇಳಿದೆ. ಆ ಎಳೆಯನ್ನಿಟ್ಟುಕೊಂಡು ಚೆನ್ನಾಗಿ ಡೆವಲಪ್ ಮಾಡಿಕೊಂಡು ಬಂದ ಕಾರ್ತಿಕ್, ಒಳ್ಳೆಯ ಚಿತ್ರಕತೆಯನ್ನೂ ರೆಡಿ ಮಾಡಿಕೊಂಡು ತಂದ ಎಂದು ಹೇಳಿದ್ದಾರೆ ಸುದೀಪ್.
ಸದ್ಯಕ್ಕಂತೂ ಸುದೀಪ್ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಎಂದರೆ ಸಿಕ್ಕಾಪಟ್ಟೆ ಬ್ಯುಸಿ. ಒಂದು ಕಡೆ ದಿ ವಿಲನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ, ಮತ್ತೊಂದೆಡೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ, ಇನ್ನೊಂದೆಡೆ ಕೋಟಿಗೊಬ್ಬ-3, ಮಗದೊಂದು ಕಡೆ ಪೈಲ್ವಾನ್ ಸಿನಿಮಾ.. ಸುದೀಪ್ ಕಂಪ್ಲೀಟ್ ಬ್ಯುಸಿ.