ಹೆಬ್ಬೆಟ್ ರಾಮಕ್ಕ ಚಿತ್ರದ ಕಥೆ ಏನು.? ಹೆಸರೇ ಸೂಚಿಸಿರುವ ರಾಮಕ್ಕ ಅರ್ಥಾತ್ ತಾರಾ ಅನಕ್ಷರಸ್ತೆ. ಮೀಸಲಾತಿಯ ಪರಿಣಾಮದಿಂದ ಗ್ರಾಮ ಪಂಚಾಯ್ತಿ ಸದಸ್ಯೆಯಾಗುವ ರಾಮಕ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆಯೂ ಆಗುತ್ತಾಳೆ. ಅನಕ್ಷರಸ್ತೆ ಎಂಬ ಕಾರಣದಿಂದಲೇ ಎದುರಿಸುವ ಸಮಸ್ಯೆಗಳು, ಸವಾಲುಗಳು ಚಿತ್ರದ ಕಥೆ.
ಹಳ್ಳಿ ಹಳ್ಳಿಗಳ ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ರಾಜಕೀಯವನ್ನು ಹಸಿಹಸಿಯಾಗಿ ಕಟ್ಟಿ ಕೊಡಲಾಗಿದೆ. ಎಲೆಕ್ಷನ್ ಹೊತ್ತಿನಲ್ಲೇ ಬಂದಿರುವ ಸಿನಿಮಾ, ಜನರನ್ನು ಚಿಂತನೆಗೆ ದೂಡಿದರೆ, ಅದು ಚಿತ್ರಕ್ಕೆ ಸಿಗುವ ಅತಿ ದೊಡ್ಡ ಯಶಸ್ಸು. ಸಿಕ್ಕಿರುವ ರಾಷ್ಟ್ರಪ್ರಶಸ್ತಿಗಿಂತ ದೊಡ್ಡ ಯಶಸ್ಸು ಆ ಮೂಲಕ ಸಿಗುವುದರಲ್ಲಿ ಅನುಮಾನವಿಲ್ಲ.
ತಾರಾ ಮತ್ತು ದೇವರಾಜ್ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ನಿರ್ದೇಶಕ ನಂಜುಂಡೇಗೌಡರ ಶ್ರಮಕ್ಕೆ ರಾಷ್ಟ್ರಪ್ರಶಸ್ತಿಗಳಲ್ಲಿ ಪುರಸ್ಕಾರ ಸಿಕ್ಕಿದೆ. ಹಾಗೆ ಪ್ರಶಸ್ತಿ ಪಡೆದ ಚಿತ್ರವನ್ನ ರಾಜ್ಯಾದ್ಯಂತ ತೆರೆಗೆ ತರುತ್ತಿರುವುದು ನಿರ್ಮಾಪಕ ಮತ್ತು ವಿತರಕ ಜಾಕ್‍ಮಂಜು.