ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಸಿನಿಮಾ ರುಸ್ತುಂ ಮುಹೂರ್ತ ಆಚರಿಸಿಕೊಂಡಿದೆ. ಈ ವೇಳೆ ಎಲ್ಲರ ಗಮನ ಸೆಳೆದಿರುವುದು ಶಿವರಾಜ್ ಕುಮಾರ್ ಅವರ ಮೀಸೆ. ಖಡಕ್ ಪೊಲೀಸ್ ಆಫೀಸರ್ ಪಾತ್ರ ಮಾಡ್ತಿರೋ ಶಿವರಾಜ್ ಕುಮಾರ್, ಮೀಸೆ ಬಿಟ್ಟು ಗನ್ ಹಿಡಿದಿದ್ದಾರೆ.
ಶಿವರಾಜ್‍ಕುಮಾರ್ ತಮ್ಮ ವೃತ್ತಿ ಜೀವನದಲ್ಲಿಯೇ ಮೊದಲ ಬಾರಿಗೆ ಮೀಸೆಯಲ್ಲಿ ಕಾಣಿಸಿಕೊಂಡಿದ್ದು ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದಲ್ಲಿ. ಅದಾದ ನಂತರ ಮೀಸೆಯನ್ನೇ ವಸ್ತುವಾಗಿಸಿಕೊಂಡಿದ್ದ ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಮೀಸೆ ಅಂಟಿಸಿಕೊಂಡೇ ನಗಿಸಿದ್ದರು ಶಿವರಾಜ್‍ಕುಮಾರ್. ಅದಾದ ಮೇಲೆ ಗಡಿಬಿಡಿ ಅಳಿಯ ಚಿತ್ರದಲ್ಲಿಯೂ ಸ್ವಲ್ಪ ಭಾಗ ಮೀಸೆ ಇತ್ತು.
ಗಂಡುಗಲಿ ಕುಮಾರರಾಮ, ಗಂಧದ ಗುಡಿ-ಭಾಗ 2ರಲ್ಲಿ ಶಿವರಾಜ್‍ಕುಮಾರ್ ಲುಕ್ಕಿಗೆ ಮೀಸೆ ಹೊಸ ಖದರ್ ಕೊಟ್ಟಿತ್ತು. ಇತ್ತೀಚೆಗೆ ಪ್ರತಿ ಚಿತ್ರದಲ್ಲೂ ವಿಭಿನ್ನವಾಗಿ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತಿರುವ ಶಿವರಾಜ್‍ಕುಮಾರ್, ಮೀಸೆಯಿಂದಾಗಿಯ ಏ ಸದ್ದು ಮಾಡ್ತಿದ್ದಾರೆ.
ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ ರುಸ್ತುಂ. ನೀವು ಇದುವರೆಗೂ ನೋಡಿರುವ ಶಿವರಾಜ್‍ಕುಮಾರ್ ಬೇರೆ.. ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ಶಿವರಾಜ್‍ಕುಮಾರ್ ಬೇರೆ ಎಂದಿರುವ ರವಿವರ್ಮ, ಚಿತ್ರದ ಶೂಟಿಂಗ್ ಶುರುವಾಗುವ ಮುನ್ನವೇ ನಿರೀಕ್ಷೆ ಹೆಚ್ಚಿಸಿದ್ದಾರೆ.