ರೆಬಲ್‍ಸ್ಟಾರ್ ಅಂಬರೀಷ್, ಅಕ್ಷರಶಃ ರೆಬಲ್ ಆಗಿಬಿಟ್ಟಿದ್ದಾರೆ. ಕಾಂಗ್ರೆಸ್‍ನಲ್ಲಿ ಅವರಿಗೆ ಕೇಳದೆಯೇ ಟಿಕೆಟ್ ಕೊಡಲಾಗಿತ್ತು. ಬಿಫಾರಂನ್ನು ಮನೆಗೇ ಕಳಿಸಿಕೊಡಲಾಗಿತ್ತು. ಆದರೆ, ತಮ್ಮನ್ನು ಅವಮಾನಕಾರಿಯಾಗಿ ಸಚಿವ ಸ್ಥಾನದಿಂದ ಕಿತ್ತು ಹಾಕಿದ್ದನ್ನು ಮರೆಯದ ಅಂಬರೀಷ್, ಈಗ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷವನ್ನು ಆಟವಾಡಿಸುತ್ತಿದ್ದಾರೆ.
ಹಾಗೆ ನೋಡಿದರೆ, ಮಂಡ್ಯದಲ್ಲಿ ಅಂಬರೀಷ್ ಪ್ರಭಾವ ಮುರಿಯಲೆಂದೇ ಚೆಲುವರಾಯ ಸ್ವಾಮಿಯನ್ನು ಪಕ್ಷಕ್ಕೆ ಕರೆತಂದಿರುವ ಸಿದ್ದರಾಮಯ್ಯ, ಆ ನಿಟ್ಟಿನಲ್ಲಿ ಗೆಲ್ತಾರಾ ಅನ್ನೋದು ಬೇರೆ ಪ್ರಶ್ನೆ. ಇದರ ಮಧ್ಯೆ ಮಂಡ್ಯದಿಂದ ರಮ್ಯಾ ನಿಲ್ತಾರಂತೆ ಅನ್ನೋ ಸುದ್ದಿಗೆ ವೇಗ ಬಂದಿತ್ತು.
ಅಂಬರೀಷ್ ಅವರು ಸತಾಯಿಸುತ್ತಿರುವ ಹಿನ್ನೆಲೆಯಲ್ಲಿ ರಮ್ಯಾ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂಬ ಸುದ್ದಿ ಹರಿದಾಡಿತ್ತು. ಇವುಗಳಿಗೆಲ್ಲ ಒಂದೇ ಮಾತಿನಲ್ಲಿ ನೋ ಎಂದುಬಿಟ್ಟಿದ್ದಾರೆ ರಮ್ಯಾ.
ಮಂಡ್ಯದಿಂದ ನಾನು ಸ್ಪರ್ಧಿಸುತ್ತಿಲ್ಲ ಎನ್ನುವುದು ರಮ್ಯಾ ಅವರ ಒನ್‍ಲೈನ್ ಉತ್ತರ. ಅಂದಹಾಗೆ ಕರ್ನಾಟಕದಲ್ಲಿ ಚುನಾವಣೆ ಇಷ್ಟು ರಂಗೇರಿರುವಾಗ ಕೂಡಾ ರಮ್ಯಾ ಎಲ್ಲಿಯೂ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ.