ದುನಿಯಾ ಸೂರಿ, ಈಗ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಬೆನ್ನು ಬೆನ್ನಿಗೆ ಹಿಟ್ ಚಿತ್ರಗಳನ್ನು ಕೊಟ್ಟಿರುವ ಸೂರಿ, ರೌಡಿಸಂ ಮತ್ತು ಕತ್ತಲ ಲೋಕದ ಕಥೆಗಳಿಗೆ ಫೇಮಸ್. ಭೂಗತ ಲೋಕದ ಮಾನವೀಯ ಮುಖಗಳನ್ನು ತಮ್ಮದೇ ಆದ ವಿಚಿತ್ರ ಶೈಲಿಯಲ್ಲಿ ಸಿನಿಮಾ ಮಾಡುವ ಸೂರಿ, ಕಾಗೆ ಬಂಗಾರ ಸಿನಿಮಾವನ್ನು ಕೈಬಿಟ್ಟಿದ್ದಾರೆ.
ಕೆಂಡಸಂಪಿಗೆ ಚಿತ್ರದ ಮೊದಲ ಭಾಗವಾಗಿ ಬರಬೇಕಿದ್ದ ಕಾಗೆ ಬಂಗಾರ ಚಿತ್ರವನ್ನು ಕೈಬಿಡೋಕೆ ಕಾರಣ, ನೋಟ್‍ಬಂಧಿ. ಹಳೆಯ 500 ಹಾಗೂ 1000 ರೂ. ನೋಟುಗಳೇ ಆ ಕಥೆಯ ಪ್ರಮುಖ ಭಾಗವಾಗಿತ್ತು. ಈಗ ಹೊಸ ನೋಟು ಬಂದಿರುವ ಕಾರಣ, ಕಥೆಯನ್ನು ಬದಲಿಸಬೇಕಾದ ಅಗತ್ಯವಿದೆ. ಹೀಗಾಗಿ ಇದನ್ನು ಕೈಬಿಟ್ಟು ಬೇರೆ ಸಿನಿಮಾ ಕೈಗೆತ್ತಿಕೊಂಡಿದ್ದಾರೆ ಸೂರಿ.
ಹಾಗೆ ಸೂರಿ ಕೈಗೆತ್ತಿಕೊಂಡಿರುವ 3 ಕಥೆಗಳಲ್ಲಿ ಕಾಮಿಡಿ ಇದೆ ಅನ್ನೋದೇ ವಿಶೇಷ. ಒಂದು ಕಾಮಿಡಿ ಕಥೆ ಸಿದ್ಧಪಡಿಸಲಾಗುತ್ತಿದ್ದು, ಅದೇ ಚಿತ್ರ ಮೊದಲು ಸೆಟ್ಟೇರಿದರೂ ಆಶ್ಚರ್ಯವಿಲ್ಲ. ಅದು ಸೂರಿಗೂ ಹೊಸತೇ. ಇನ್ನೊಂದು ಕಥೆಯನ್ನು ಸೂರಿಯವರ ಮಿತ್ರ ಪೊಲೀಸ್ ಅಧಿಕಾರಿ ಉಮೇಶ್ ಬರೆಯುತ್ತಿದ್ದಾರಂತೆ. ಅದು ನೈಜ ಕಥೆಯೇ ಆಗಿರಲಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಮತ್ತೊಂದು ಕಥೆ ಐತಿಹಾಸಿಕ. ಅದನ್ನು ಸಿದ್ಧಪಡಿಸುತ್ತಿರುವದು ಸುರೇಂದ್ರನಾಥ್.
ಆದರೆ, ಕ್ರೈಂ, ರಕ್ತಸಿಕ್ತ ಕಥೆಗಳನ್ನೇ ಇದುವರೆಗೆ ಸಿನಿಮಾ ಮಾಡಿರುವ ಸೂರಿ, ಕಾಮಿಡಿ ಸಿನಿಮಾ ಮಾಡಿದರೆ ಹೇಗಿರುತ್ತೆ ಅನ್ನೋದೇ ಕುತೂಹಲ.