ಯೋಗರಾಜ್ ಭಟ್ಟರ ಚಿತ್ರಗಳಲ್ಲಿ ಅದೇನೇ ಡೈಲಾಗುಗಳ ಸುರಿಮಳೆಯಾದರೂ, ಅಲ್ಲೊಂದು ಜೀವನ ಪ್ರೀತಿಯ ಸಂದೇಶ ಇದ್ದೇ ಇರುತ್ತೆ. ಮಣಿ ಚಿತ್ರದಿಂದಲೂ ಭಟ್ಟರನ್ನು ಭಟ್ಟರ ಸಿನಿಮಾಗಳನ್ನು ನೋಡುತ್ತಾ ಬಂದವರಿಗೆ ಅದು ಕಣ್ಣಿಗೆ ಬಿದ್ದಿರುತ್ತೆ. ತಾವು ಹೇಳಬೇಕಾದ್ದನ್ನು ವಿಡಂಬನೆ, ವ್ಯಂಗ್ಯ, ಹಾಸ್ಯ ಹಾಗೂ ಭಾವುಕತೆಯಲ್ಲಿ ಹೇಳುವುದು ಭಟ್ಟರ ಶೈಲಿ. ಭಟ್ಟರ ನಿರ್ದೇಶನದ ಹೊಸ ಸಿನಿಮಾ ಪಂಚತಂತ್ರ. ಈಗಾಗಲೇ ಶೇ.70ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರದಲ್ಲಿರುವುದು ಯುವಕರು ಮತ್ತು ಮುದುಕರ ನಡುವಿನ ಹೋರಾಟದ ಕಥೆ.
ಕಥೆಯಲ್ಲಿ ಗ್ಯಾರೇಜ್ ಮತ್ತು ಒಂದು ಕಾಂಪ್ಲೆಕ್ಸ್ ಪ್ರಮುಖ ಪಾತ್ರ ವಹಿಸುತ್ತೆ. ಯುವಕನ ಪ್ರೇಮ, ಕಾಮ, ಜೋಷ್ ಹಾಲಿವುಡ್ ಶೈಲಿಯಲ್ಲಿದ್ದರೆ, ಮುದುಕರ ಜೀವನ ಹಳೆ ಅಂಬಾಸಿಡರ್ ಕಾರ್ ಥರ ಇರುತ್ತೆ. ಇವರಿಬ್ಬರ ನಡುವಿನ ಜನರೇಷನ್ ಗ್ಯಾಪ್‍ನ್ನು ತೆಳು ಹಾಸ್ಯದ ಮೂಲಕ ಹೇಳುತ್ತಿದ್ದೇವೆ ಎಂದು ಹೇಳಿದ್ದಾರೆ ಭಟ್ಟರು.
ಚಿತ್ರದ ಕಥೆಗೆ ಹೊಸಬರೇ ಬೇಕು ಎನಿಸಿತು. ಹೀಗಾಗಿ ವಿಹಾನ್ ಗೌಡ, ಅಕ್ಷರ ಗೌಡ, ಸೋನಾಲ್ ಮಾಂಥೆರೋ ಮೊದಲಾದವರಿದ್ದಾರೆ. ರಂಗಾಯಣ ರಘು, ಕರಿಸುಬ್ಬು ಮೊದಲಾದ ಸೀನಿಯರ್ಸ್ ಕೂಡಾ ಇದ್ದಾರೆ. ಯೋಗರಾಜ್ ಭಟ್ ಸಿನಿಮಾಸ್ ಬ್ಯಾನರ್‍ನಲ್ಲಿ ಸಿನಿಮಾ ತಯಾರಾಗುತ್ತಿದೆ. ಹರಿಪ್ರಸಾದ್ ಜಯಣ್ಣ ಹಾಗೂ ಸನತ್ ಕುಮಾರ್ ಚಿತ್ರದ ನಿರ್ಮಾಪಕರು.